ಉಡುಪಿ : ಮೆಸ್ಕಾಂ ಇಲಾಖೆ ಈ ಬಾರಿ ವಾಣಿಜ್ಯ ಕಟ್ಟಡಗಳ ವಿದ್ಯುತ್ ಬಳಕೆದಾರರಿಗೆ, ಹಾಗೂ ಗೃಹಜ್ಯೋತಿ ಯೋಜನೆಯ ವಿದ್ಯುತ್ ಬಳಕೆದಾರರಿಗೆ ಅನಗತ್ಯವಾಗಿ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕ ವಸೂಲಿ ಮಾಡಿ ಸಾರ್ವಜನಿಕರ ಮೇಲೆ ಬರೆ ಎಳೆದಿದೆ.
ಪಿಂಚಣಿದಾರರಿಗೆ ಸರಕಾರದ ಪಿಂಚಣಿನಿಧಿಯ ಹಣವನ್ನು ವಿನಿಯೋಗಿಸುವುದು ನಿಯಮ. ಅದು ಬಿಟ್ಟು ಪಿಂಚಣಿ ಮತ್ತು ಗ್ರಾಚ್ಯುಟಿ ಫಲಾನುಭವಿಗಳಿಗೆಂದು, ವಿದ್ಯುತ್ ಬಳಕೆದಾರರಿಂದ ವಿದ್ಯುತ್ ಶುಲ್ಕದೊಂದಿಗೆ ಹಣ ಸಂಗ್ರಹಿಸುವುದು ಅಕ್ರಮ ಅಲ್ಲವೇ..? ಸರಕಾರವು ತಕ್ಷಣ ವಿದ್ಯುತ್ ಶುಲ್ಕದೊಂದಿಗೆ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕ ವಿಧಿಸುವ ಹೊಸ ನಿಯಮವನ್ನು ರದ್ದುಗೊಳಿಸಬೇಕು. ಈ ಬಗ್ಗೆ ವಿರೋಧಪಕ್ಷವು ದ್ವನಿ ಎತ್ತಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಹಾಗೂ ಸಹಸಂಚಾಲಕರಾದ ಕೆ. ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.