Home Crime ಶಿರ್ವ: ಕೆಲಸದ ವಿಚಾರದಲ್ಲಿ ಗಲಾಟೆ : ಯುವಕನ ಮೇಲೆ ಅಡಿಕೆ ಮರದ ರೀಪಿನಿಂದ ಹಲ್ಲೆ, ಕೊಲೆ...

ಶಿರ್ವ: ಕೆಲಸದ ವಿಚಾರದಲ್ಲಿ ಗಲಾಟೆ : ಯುವಕನ ಮೇಲೆ ಅಡಿಕೆ ಮರದ ರೀಪಿನಿಂದ ಹಲ್ಲೆ, ಕೊಲೆ ಬೆದರಿಕೆ…!!

ಶಿರ್ವ: ಕೆಲಸದ ವಿಚಾರದಲ್ಲಿ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ವ್ಯಕ್ತಿಯೊಬ್ಬ ಅಡಿಕೆ ಮರದ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕಾಪು ತಾಲೂಕಿನ ಶಿರ್ವ ಗ್ರಾಮದ ಕುದ್ರಬೆಟ್ಟುವಿನಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಗೋಪಾಲ ಲಕ್ಷ್ಮಣ ಗೊಲ್ಲರ್ (26) ಎಂದು ತಿಳಿದು ಬಂದಿದೆ.

ನವೆಂಬರ್ 13ರಂದು ರಾತ್ರಿ ಸ್ನೇಹಿತ ಆಕಾಶ್ ಜೊತೆ ಊರಿನಿಂದ ಬಂದಿದ್ದ ಗೋಪಾಲ ಅವರು ಕುದ್ರಬೆಟ್ಟುವಿನ ಜಯರಾಂ ಅಂದ್ರಾದೆ ಅವರ ಬಾಡಿಗೆ ಮನೆಯಲ್ಲಿ ವಾಸವಿರುವ ಉಮೇಶ್ ಅವರ ಕೊಠಡಿಗೆ ತೆರಳಿ ತಂಗಿದ್ದರು. ಅದೇ ಕೊಠಡಿಯಲ್ಲಿ ಉಮೇಶ್ ಅವರ ಪತ್ನಿಯ ಸಹೋದರ ಮನೋಜ್ ಕೂಡ ಇದ್ದರು.

ಗೋಪಾಲ ಅವರು ಸ್ವಂತ ಹುಲ್ಲು ಕಟಿಂಗ್ ಯಂತ್ರ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಇದರಿಂದ ತನ್ನ ತಂಗಿಯ ಗಂಡ ಉಮೇಶ್ ಅವರ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂಬ ಉದ್ದೇಶದಿಂದ ಮನೋಜ್ ದ್ವೇಷ ಹೊಂದಿದ್ದ ಎನ್ನಲಾಗಿದೆ.

ನವೆಂಬರ್ 14ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಗೋಪಾಲ ಅವರು ತಮ್ಮ ಕೊಠಡಿಗೆ ತೆರಳಲು ಸಿದ್ಧರಾಗುತ್ತಿದ್ದ ವೇಳೆ ಮನೋಜ್ ಏಕಾಏಕಿ ಕೈಯಿಂದ ಹಲ್ಲೆ ನಡೆಸಿ, ಅಡಿಕೆ ಮರದ ರೀಪಿನಿಂದ ಬೆನ್ನು, ಕುತ್ತಿಗೆ ಹಾಗೂ ಭುಜದ ಭಾಗಕ್ಕೆ ಹೊಡೆದಿದ್ದಾನೆ. ಪರಿಣಾಮ ಗೋಪಾಲ ಅವರ ಕುತ್ತಿಗೆ ಮತ್ತು ಗಂಟಲಿನ ಕೆಳಭಾಗದಲ್ಲಿ ರಕ್ತಗಾಯವಾಗಿದೆ. ಅಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.