ಉಡುಪಿ : ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಅಕ್ಕ ಪಡೆ ತಂಡವು ಸಿಆರ್‌ಪಿ ಹಾಗೂ ಇಸಿಒ ಇಲಾಖೆಗಳ ಸಹಯೋಗದೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿತು.
ಈ ವೇಳೆ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಸುಮಾರು 30 ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಶಾಲೆಗೆ ತೆರಳದೆ ಫ್ಯಾಕ್ಟರಿಯ ಸುತ್ತಮುತ್ತ ಕಾಲ ಕಳೆಯುತ್ತಿರುವುದು ಕಂಡುಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು 6 ವರ್ಷ ಮೇಲ್ಪಟ್ಟ ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದರು.
ನಂತರ ರಕ್ಷಿಸಲಾದ ಮಕ್ಕಳಲ್ಲಿ 7 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.




