ಉಡುಪಿ: ಮೀನು ವ್ಯಾಪಾರದಲ್ಲಿ ಹಣ ಪಾವತಿಸದೆ ಹಾಗೂ ಮೀನು ಸಾಗಾಟಕ್ಕೆ ಪಡೆದುಕೊಂಡಿದ್ದ ಬಾಕ್ಸ್ಗಳನ್ನು ವಾಪಸ್ ನೀಡದೆ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿರುವ ಆರೋಪದಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುತೋನ್ಸೆ ಗ್ರಾಮದ ಪ್ರವೀಣ ಪೂಜಾರಿ (44) ಎಂಬವರು ಮೀನುಗಾರಿಕೆ ವ್ಯವಹಾರ ಮಾಡಿಕೊಂಡಿದ್ದು, ಈ ಹಿಂದೆ ತಮ್ಮಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇರ್ಷಾದ್ ಎಂಬಾತನ ಪರಿಚಯದ ಉಳ್ಳಾಲ ನಿವಾಸಿ ರಫೀಕ್ ಯಾನೆ ಅಪ್ಪು ಎಂಬಾತನೊಂದಿಗೆ ಮೀನು ವ್ಯಾಪಾರ ನಡೆಸಲು ಮುಂದಾಗಿದ್ದರು.
ಅದರಂತೆ 2026ರ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಪ್ರವೀಣ ಪೂಜಾರಿಯವರು ಆರೋಪಿಗೆ ಮೀನು ನೀಡಿದ್ದು, ವ್ಯವಹಾರದ ಸಮಯದಲ್ಲಿ ಆರೋಪಿಯು ಸ್ವಲ್ಪ ಸ್ವಲ್ಪ ಹಣ ಪಾವತಿಸಿದ್ದಾನೆ. ಆದರೆ ಒಟ್ಟು 4.40 ಲಕ್ಷ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದಾನೆ ಎನ್ನಲಾಗಿದೆ.
ಇದಲ್ಲದೆ, ಮೀನು ಸಾಗಾಟಕ್ಕಾಗಿ ಪಡೆದುಕೊಂಡಿದ್ದ 240 ಮೀನು ಬಾಕ್ಸ್ಗಳನ್ನು ಕೂಡ ವಾಪಸ್ ನೀಡಿಲ್ಲ. ಪಿರ್ಯಾದಿದಾರರು ಕರೆ ಮಾಡಿದರೂ ಆರೋಪಿಯು ಕರೆ ಸ್ವೀಕರಿಸದೆ, ಹಣ ಹಾಗೂ ಮೀನು ಬಾಕ್ಸ್ಗಳನ್ನು ಹಿಂದಿರುಗಿಸದೆ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಮಾನ್ಯ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



