Home Dskshina Kannada ಕಡಬ: ತಡರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಕಿ : ಪ್ರಯಾಣಿಕರು ಪಾರು…!!

ಕಡಬ: ತಡರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಕಿ : ಪ್ರಯಾಣಿಕರು ಪಾರು…!!

ಕಡಬ: ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಶನಿವಾರ (ಸೆ.5) ತಡರಾತ್ರಿ ಹಠಾತ್‌ ಬೆಂಕಿ ಕಾಣಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಭೀಕರ ದುರಂತವೊಂದು ತಪ್ಪಿದೆ. ಬಸ್‌ನಲ್ಲಿದ್ದ ಎಲ್ಲಾ 37 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಬಸ್‌ ಬಿಳಿನೆಲೆ ಗ್ರಾಮದ ಕೈಕಂಬ-ಗುಂಡ್ಯ ರಸ್ತೆಯ ಎರ್ಮಾಯಿಲ್‌ ಎಂಬಲ್ಲಿ ತಲುಪಿದಾಗ ತಡರಾತ್ರಿ ಈ ಅವಘಡ ನಡೆದಿದೆ. ಚಲಿಸುತ್ತಿದ್ದ ಬಸ್‌ನಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದ್ದು, ತತ್‌ಕ್ಷಣವೇ ಬಸ್‌ಚಾಲಕ ಇದನ್ನು ಗಮನಿಸಿದ್ದು, ರಸ್ತೆ ಬದಿಗೆ ನಿಲ್ಲಿಸಿ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಕೂಡಲೇ ಕೆಳಗಿಳಿಯುವಂತೆ ಸೂಚನೆ ನೀಡಿದ್ದಾರೆ.

ನೋಡನೋಡುತ್ತಿದ್ದಂತೆ ಬಸ್‌ ಧಗಧಗನೆ ಹೊತ್ತಿ ಉರಿದಿದ್ದು, ಸಂಪೂರ್ಣವಾಗಿ ಭಸ್ಮಗೊಂಡಿದೆ.

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಬಸ್‌ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಡರಾತ್ರಿಯೇ ಬೆಂಕಿ ನಂದಿಸುವ ಕೆಲಸ ನಡೆದಿದೆ. ಕಡಬ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಅವಘಡಕ್ಕೆ ಕಾರಣ ಇರಬಹುದು ಎಂದು ಶಂಕಿಸಿದ್ದಾರೆ.