Home Crime ಕೋಟ: ಲಾರಿ ಡಿಕ್ಕಿ – ಸೈಕಲ್ ಸವಾರ ಸಾವು…!!

ಕೋಟ: ಲಾರಿ ಡಿಕ್ಕಿ – ಸೈಕಲ್ ಸವಾರ ಸಾವು…!!

ಕೋಟ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ಮಾಬುಕಳ ಜಂಕ್ಷನ್ ಬಳಿ ನಡೆದಿದೆ.

ಮೃತರು ರೊನಾಲ್ಡ್ ಲೂವಿಸ್ (62) ಬಾಳ್ಕುದ್ರು ಗ್ರಾಮದವರು. ಅ.22 ರಂದು ಸಂಜೆ 4:15ಕ್ಕೆ ಹಂಗಾರಕಟ್ಟೆ ಕಡೆಯಿಂದ ಸೈಕಲ್ ನಲ್ಲಿ ಬಂದು ಮಾಬುಕಳ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ಅಂಚಿನಿಂದ ಪೂರ್ವದ ಡಿವೈಡರ್ ಬಳಿ ನಿಂತುಕೊಂಡು ಹೆದ್ದಾರಿ ದಾಟಲು ಯತ್ನಿಸುತ್ತಿದ್ದರು.

ಈ ವೇಳೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಿದ್ದ KA-20-AD-2712 ನಂಬರಿನ ಅಶೋಕ್ ಲೇಲ್ಯಾಂಡ್ ಲಾರಿಯ ಚಾಲಕ ಸದಾನಂದ ಡಿವೈಡರ್ ಸಮೀಪ ತೀರಾ ಬಲಬದಿಗೆ ಬಂದು ಸೈಕಲ್ ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ರೊನಾಲ್ಡ್ ರಸ್ತೆಗೆ ಬಿದ್ದು ತೀವ್ರ ರಕ್ತಗಾಯಗೊಂಡಿದ್ದರು.

ಕೂಡಲೇ ಅವರನ್ನು ಬ್ರಹ್ಮಾವರ ಸಿಎಚ್‌ಸಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 159/2026 ಕಲಂ 281, 106 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.