ಉಡುಪಿ: ಮದುವೆಯ ನಂತರ ಪತಿಯಿಂದ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿದೆ ಎಂದು ಪತ್ನಿ ನೀಡಿದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಮಂಗಳೂರಿನ ಡೊಂಗರಕೇರಿಯ ಮೇಘನಾ (37). ಇವರಿಗೆ 25-04-2022 ರಂದು ಪ್ರಣಾಮ್ ಎಂಬವರೊಂದಿಗೆ ಮಂಗಳೂರಿನ ಸಾಯಿ ಪ್ಯಾಲೇಸ್ನಲ್ಲಿ ನಿಶ್ಚಿತಾರ್ಥವಾಗಿದ್ದು, 05-09-2022 ರಂದು ಕುದ್ರೋಳಿ ಗೋಕರ್ಣನಾಥೇಶ್ವರ ಸಭಾಭವನದಲ್ಲಿ ಮದುವೆ ಮತ್ತು 07-09-2022 ರಂದು ಟಿಎಂಎ ಪೈ ಹಾಲ್ನಲ್ಲಿ ಆರತಕ್ಷತೆ ನಡೆದಿದೆ. ಮದುವೆಯ ಸುಮಾರು 13 ಲಕ್ಷ ರೂ ಖರ್ಚನ್ನು ಮೇಘನಾ ಅವರ ತಾಯಿಯವರೇ ಭರಿಸಿದ್ದು, ಜೊತೆಗೆ ವರ ಪ್ರಣಾಮ್ ಅವರಿಗೆ ವಜ್ರದ ಉಂಗುರ, ಚಿನ್ನದ ಸರ ಮತ್ತು ಬಂಗಾರದ ಬ್ರೇಸ್ಲೈಟ್ ಉಡುಗೊರೆಯಾಗಿ ನೀಡಿದ್ದರು.
ಮದುವೆಯ ನಂತರ ಮಲ್ಪೆಯ ಗಂಡನ ಮನೆಯಲ್ಲಿ ವಾಸವಾಗಿದ್ದಾಗ ಪತಿ ಪ್ರಣಾಮ್ ವಿನಾಕಾರಣ ಗಲಾಟೆ ಮಾಡಿ ಅವಾಚ್ಯವಾಗಿ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಇದಕ್ಕೆ ಪತಿಯ ತಂದೆ ನಾರಾಯಣ ಶೆಟ್ಟಿ ಮತ್ತು ಅತ್ತೆ ಶಶಿಕಲಾ ಅವರು ಕುಮ್ಮಕ್ಕು ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿದೇಶದಲ್ಲಿದ್ದಾಗಲೂ ಪತಿ ಕೈಯಿಂದ ಹೊಡೆದು ಬೈದು ಹಿಂಸೆ ನೀಡಿದ್ದಾನೆ ಎಂದು ಮೇಘನಾ ಆರೋಪಿಸಿದ್ದಾರೆ.
ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026, ಕಲಂ 498(ಎ), 323, 504 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


