ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪಂಪಾ ನದಿಯಲ್ಲಿ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಎಸೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಸ್ಥಳದಲ್ಲೇ ₹5,000ವರೆಗೆ ದಂಡ ವಿಧಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಶಬರಿಮಲೆ ಹೆಚ್ಚುವರಿ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನ್ನಿಕ್ಕರ ಅವರು ನವೆಂಬರ್ 22ರಂದು ಈ ಆದೇಶ ಹೊರಡಿಸಿದ್ದು, ಪಂಪಾ ನದಿ, ಅದರ ಉಪನದಿಗಳು, ಸ್ನಾನಘಟ್ಟಗಳು ಹಾಗೂ ನದಿ ತೀರದ ಸಾರ್ವಜನಿಕ ಪ್ರದೇಶಗಳಿಗೂ ನಿಷೇಧ ಅನ್ವಯವಾಗಲಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯ್ದೆಯಡಿ ಆದೇಶ ಜಾರಿಗೊಳಿಸಲಾಗಿದ್ದು, ಮುಂದಿನ ಎರಡು ತಿಂಗಳವರೆಗೆ ನಿಯಮ ಜಾರಿಯಲ್ಲಿರಲಿದೆ.
ನಿಯಮ ಉಲ್ಲಂಘಿಸಿದವರು ದಂಡ ವಿಧಿಸಿದ 15 ದಿನಗಳೊಳಗೆ ಹಣ ಪಾವತಿಸಬೇಕು. ಇಲ್ಲದಿದ್ದರೆ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮದ ಅನುಷ್ಠಾನ, ತಪಾಸಣೆ ಹಾಗೂ ದಂಡ ವಸೂಲಿಗೆ ಪಂಪಾದ ಕರ್ತವ್ಯ ನಿರತ ಮ್ಯಾಜಿಸ್ಟ್ರೇಟ್, ಪೊಲೀಸ್ ವಿಶೇಷ ಅಧಿಕಾರಿ ಮತ್ತು ರನ್ನಿ-ಪೆರುನಾಡ್ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದೆ.
ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಭಕ್ತರು ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ಬಳಸಿದ ಬಟ್ಟೆಗಳನ್ನು ನದಿಯಲ್ಲೇ ಬಿಟ್ಟು ಹೋಗುತ್ತಿರುವುದರಿಂದ ಮಾಲಿನ್ಯ ಹೆಚ್ಚುತ್ತಿದೆ. ಈ ಬಾರಿಯ ಮಂಡಲ ಯಾತ್ರೆಯ ಮೊದಲ ಮೂರು ದಿನಗಳಲ್ಲೇ ನದಿಯಿಂದ ಸುಮಾರು 23 ಟನ್ ಬಟ್ಟೆ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ. ಪಂಪಾ ನದಿ ಸ್ಥಳೀಯರು ಹಾಗೂ ಭಕ್ತರಿಗೆ ಪ್ರಮುಖ ಕುಡಿಯುವ ನೀರಿನ ಮೂಲವಾಗಿರುವುದರಿಂದ ನೀರಿನ ಸ್ವಚ್ಛತೆ ಕಾಪಾಡಲು ಆಡಳಿತ ಈ ಕ್ರಮ ಕೈಗೊಂಡಿದೆ.
ಇದೇ ವೇಳೆ ಪಂಪಾ ನದಿಯ ಸ್ವಚ್ಛತೆ ಕುರಿತು ಭಕ್ತರಲ್ಲಿ ಜಾಗೃತಿ ಮೂಡಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ. ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ವಿವಿಧ ಭಾಷೆಗಳಲ್ಲಿ ಜಾಗೃತಿ ಸಂದೇಶ ಪ್ರಸಾರ ಮಾಡುವಂತೆ ನಿರ್ದೇಶನ ನೀಡಲಾಗಿದೆ. ದೇವಸ್ವಂ ಮಂಡಳಿಯೂ ತ್ಯಾಜ್ಯ ತೆರವಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ.
ನವೆಂಬರ್ನಿಂದ ಜನವರಿವರೆಗೆ ನಡೆಯುವ ಮಂಡಲ-ಮಕರವಿಳಕ್ಕು ಯಾತ್ರೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ, ಪಂಪಾ ನದಿಗೆ ಬಟ್ಟೆ ಅಥವಾ ಇತರ ತ್ಯಾಜ್ಯ ಎಸೆಯದೆ ನಿಗದಿತ ಸ್ಥಳಗಳಲ್ಲೇ ವಿಲೇವಾರಿ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.


