Home Latest 172 ಪ್ರಯಾಣಿಕರ ಜೀವ ಉಳಿಸಿದ ಪೈಲಟ್‌ ಸ್ಮಿತ್ ಮಚ್ಚರ್ ಅವರಿಗೆ ದುಬೈ ಯುವರಾಜರ ನಮನ…!!

172 ಪ್ರಯಾಣಿಕರ ಜೀವ ಉಳಿಸಿದ ಪೈಲಟ್‌ ಸ್ಮಿತ್ ಮಚ್ಚರ್ ಅವರಿಗೆ ದುಬೈ ಯುವರಾಜರ ನಮನ…!!

ದುಬೈ: ವಿಮಾನ ಹಾರಾಟದ ವೇಳೆ ಸಹ-ಪೈಲಟ್‌ನಿಂದ ನಡೆದ ಭೀಕರ ಮಾರಣಾಂತಿಕ ಹಲ್ಲೆಯ ನಡುವೆಯೂ ಅಪಾರ ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ಪ್ರದರ್ಶಿಸಿ 172 ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಆಸ್ಪತ್ರೆಗೆ ತೆರಳಿ ಭೇಟಿಯಾದರು.

ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ವಿಚಾರಿಸಿದ ಯುವರಾಜರು, ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಧೈರ್ಯ ತುಂಬಿದರು. ಸಂಕಷ್ಟದ ಕ್ಷಣದಲ್ಲಿ ಅಪಾಯವನ್ನು ಲೆಕ್ಕಿಸದೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಅವರ ಅಸಾಮಾನ್ಯ ಸಾಹಸ ಮತ್ತು ಕರ್ತವ್ಯಬದ್ಧತೆಗೆ ಕೃತಜ್ಞತೆ ಸಲ್ಲಿಸಿದರು.

ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಯುವರಾಜರು, ದೇಶದ ನಾಯಕತ್ವ ಹಾಗೂ ಪ್ರತಿಯೊಬ್ಬ ನಾಗರಿಕರ ಪರವಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಹೃತ್ಪೂರ್ವಕ ಮೆಚ್ಚುಗೆ ಮತ್ತು ಗೌರವ ವ್ಯಕ್ತಪಡಿಸಿದರು.

ಅವರು ನಮ್ಮ ತಂಡದ ಹೆಮ್ಮೆಯ ಭಾಗ ಮಾತ್ರವಲ್ಲ, ರಾಷ್ಟ್ರದ ಯಶೋಗಾಥೆಯ ಪ್ರತೀಕ. ಕರುಣೆ, ಶಾಂತಿ ಮತ್ತು ಜೀವ ರಕ್ಷಣೆಯ ಮೌಲ್ಯಗಳನ್ನು ಗೌರವಿಸುವ ಯುಎಇಯ ನೈಜ ಆದರ್ಶಗಳಿಗೆ ಅವರ ಧೈರ್ಯ ಸಾಕ್ಷಿಯಾಗಿದೆ ಎಂದು ಶೇಖ್ ಹಮ್ದಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಮಾನದಲ್ಲಿನ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲೂ ಸ್ಥೈರ್ಯ ಕಳೆದುಕೊಳ್ಳದೆ 172 ಮಂದಿಯ ಜೀವ ರಕ್ಷಣೆಗೆ ಮುಂದಾದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇದೀಗ ಉನ್ನತ ಮಟ್ಟದ ಗೌರವ ವ್ಯಕ್ತವಾಗಿದ್ದು, ಅವರ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.