ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹತ್ತಿರ ಸಂಜೆ 7 ಗಂಟೆ ಸುಮಾರಿಗೆ ಕುಂಪಲ ಬೈಪಾಸ್ ಬಳಿಯ ಡಿ ಮಾರ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ 68 ವರ್ಷದ ಹನೀಫ್ ವಲಿಮೊಹಮ್ಮದ್ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.
ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ KA-19-MJ-8323 ಕಾರನ್ನು ವಿಶ್ವನಾಥ ಎಂಬವರು ದುಡುಕು ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಹನೀಫ್ ಅವರು ಕಾರಿನ ಮುಂಭಾಗದ ಗಾಜಿನ ಮೇಲೆ ಬಿದ್ದು, ಬಳಿಕ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ KL-23-B-2025 ಕಾರಿನ ಮುಂಭಾಗಕ್ಕೂ ಬಿದ್ದಿದ್ದಾರೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಗಾಯಾಳುವನ್ನು ದೇರಳಕಟ್ಟೆಯ ಯೆನಪೋಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ರಾತ್ರಿ 7.44ಕ್ಕೆ ಹನೀಫ್ ವಲಿಮೊಹಮ್ಮದ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಟ್ರಾಫಿಕ್ ಸೌತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ನಡೆಸುತ್ತಿದ್ದಾರೆ.



