ಮಲ್ಪೆ : ಉಡುಪಿ ಜಿಲ್ಲೆಯಲ್ಲಿ ಮತ್ತೆ ಜೂಜಾಟದ ವಿರುದ್ಧ ಮಲ್ಪೆ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಆಟ ಆಡುತ್ತಿದ್ದ ಐವರನ್ನು ಬಂಧಿಸಿ ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಈರಣ್ಣ ಶಿರಗುಂಪಿ ಅವರ ನೇತೃತ್ವದಲ್ಲಿ ಪೊಲೀಸರು ರಾತ್ರಿ ಸುಮಾರು 10:50 ಗಂಟೆಗೆ ಕಡೆಕಾರ್ ಪಡುಕೆರೆ ಹೊಳೆಯ ಸಮೀಪದ ಹಳೆಯ ತಂಗುದಾಣದ ಬಳಿ ಮರೆಯಲ್ಲಿ ನಿಂತು ಪರಿಶೀಲನೆ ನಡೆಸಿದ ವೇಳೆ 5–6 ಮಂದಿ ಮೊಬೈಲ್ ಫೋನ್ ಬೆಳಕಿನಲ್ಲಿ ನ್ಯೂಸ್ ಪೇಪರ್ ಹಾಸಿಕೊಂಡು ಇಸ್ಪೀಟ್ ಎಲೆಗಳ ಮೂಲಕ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ.
ಪೊಲೀಸರು ದಾಳಿ ನಡೆಸಿದಾಗ ಓರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು, ಉಳಿದ ಐವರನ್ನು ಬಂಧಿಸಲಾಗಿದೆ. ಬಂಧಿತರನ್ನು ನಿತಿನ್ ರಾಜ್ (35), ಸಚಿನ್ ಆರ್ ಶೆಟ್ಟಿ (35), ಸತೀಶ್ @ ಕಿಶೋರ್ (38), ರಂಜಿತ್ ಕೆ ಅಮೀನ್ (39) ಮತ್ತು ರವಿ (36) ಎಂದು ಗುರುತಿಸಲಾಗಿದೆ. ಪರಾರಿಯಾದ ವ್ಯಕ್ತಿ ಉದ್ಯಾವರ ಮೂಲದ ಕಿಶೋರ್ ಎಂದು ತಿಳಿದುಬಂದಿದೆ.





ದಾಳಿ ವೇಳೆ 52 ಇಸ್ಪೀಟ್ ಎಲೆಗಳು, ನಾಲ್ಕು ನ್ಯೂಸ್ ಪೇಪರ್ ಹಾಳೆಗಳು, ನಾಲ್ಕು ಮೊಬೈಲ್ ಫೋನ್‌ಗಳು, ಪವರ್ ಬ್ಯಾಂಕ್ ಸೇರಿದಂತೆ ಒಟ್ಟು ₹4,90,920 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಜೂಜಾಟಕ್ಕೆ ಬಳಸಿದ್ದ ಟೊಯೋಟಾ ಫಾರ್ಚೂನರ್ ಹಾಗೂ ಮಾರುತಿ ಸ್ವಿಫ್ಟ್ ಕಾರುಗಳನ್ನು ಸಹ ಜಪ್ತಿ ಮಾಡಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಪರಾರಿಯಾದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.



