Home Karkala News ಕಸ್ತೂರಿರಂಗನ್ ವರದಿ : ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ : ಸಿಎಂ ಡಿಕೆಶಿ…!!

ಕಸ್ತೂರಿರಂಗನ್ ವರದಿ : ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ : ಸಿಎಂ ಡಿಕೆಶಿ…!!

ವರದಿ ಕುರಿತು ಸೆ.27ರೊಳಗೆ ರಾಜ್ಯದ ನಿಲುವು : ತಜ್ಞರ ಸಮಿತಿ, ಭೌತಿಕ ಸರ್ವೇ, ಗ್ರಾಮಸಭೆ ಅಭಿಪ್ರಾಯ ಸಂಗ್ರಹ ಪರಿಶೀಲನೆ….

ಕಾರ್ಕಳ: ‘ನಾನು ಯಾರಿಗೂ ಉತ್ತರ ಕೊಡಲು ಬಂದಿಲ್ಲ. ಜನರ ಬೇಡಿಕೆ ಹಾಗೂ ಭಾವನೆಗಳನ್ನು ಅವರಿಂದಲೇ ತಿಳಿದುಕೊಳ್ಳಲು ಬಂದಿದ್ದೇನೆ. ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಸ್ತೂರಿರಂಗನ್ ವರದಿಯಿಂದ ಆತಂಕಕ್ಕೊಳಗಾಗಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಮಸ್ಥರು, ಮಲೆಕುಡಿಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಅಹವಾಲು ಆಲಿಸಲು ಶುಕ್ರವಾರ ಹೆಬ್ರಿಗೆ ಆಗಮಿಸಿದ್ದ ಅವರು, ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

‘ವಿಧಾನಸೌಧದಲ್ಲಿ ಕುಳಿತು ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಸತ್ಯಾಸತ್ಯತೆ ಹಾಗೂ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ನಿಮ್ಮ ಬಳಿಗೆ ಬಂದಿದ್ದೇನೆ. ಜನರ ನೋವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸರಿಯಾದ ತೀರ್ಮಾನ ಕೈಗೊಳ್ಳಲು ಸಾಧ್ಯ’ ಎಂದರು.

ಕಸ್ತೂರಿರಂಗನ್ ವರದಿ ಕುರಿತು ಸೆ.27ರೊಳಗೆ ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಬೇಕಿರುವ ಹಿನ್ನೆಲೆಯಲ್ಲಿ, ಜನರ ಅಭಿಪ್ರಾಯವನ್ನು ಆಧಾರವಾಗಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ತಜ್ಞರ ಸಮಿತಿ ರಚನೆ, ಕೇರಳ ಮಾದರಿಯ ಅನುಸರಣೆ, ಗ್ರಾಮಸಭೆಗಳ ಮೂಲಕ ಅಭಿಪ್ರಾಯ ಸಂಗ್ರಹ, ಭೌತಿಕ ಸರ್ವೇ ಹಾಗೂ ಜೋನಲ್ ಮ್ಯಾನೇಜ್‌ಮೆಂಟ್ ಪ್ಲಾನ್ ರೂಪಿಸುವುದು ಸೇರಿದಂತೆ ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಸರ್ಕಾರ ಪರಿಶೀಲಿಸಲಿದೆ ಎಂದು ತಿಳಿಸಿದರು.

‘ಇದು ಕೇವಲ ನನ್ನೊಬ್ಬನ ಅಭಿಪ್ರಾಯವಾಗಬಾರದು. ಜನರ ಅಭಿಪ್ರಾಯವಾಗಬೇಕು. ಸುಮ್ಮನೆ ಘೋಷಣೆ ಮಾಡುವುದು ಮುಖ್ಯವಲ್ಲ; ಸಹಿ ಹಾಕಿದ ಬಳಿಕ ಅದು ಕಾರ್ಯರೂಪಕ್ಕೆ ಬರಬೇಕು. ನಿಮ್ಮ ಪ್ರತಿನಿಧಿಗಳ ಮಾತುಗಳನ್ನು ವಿಧಾನಸಭೆಯಲ್ಲಿ ಕೇಳುತ್ತೇನೆ. ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ’ ಎಂದರು.

ಕಸ್ತೂರಿರಂಗನ್ ವರದಿ ಕುರಿತು ವಿಧಾನಸಭೆಯಲ್ಲಿ ಪ್ರತ್ಯೇಕ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರ ಅಭಿಪ್ರಾಯ ಹಾಗೂ ಭಾವನೆಗಳನ್ನು ಪಡೆಯುವುದಾಗಿ ಹೇಳಿದರು.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಜನರಿಗೆ ತೊಂದರೆ ನೀಡದಂತೆ ಸೂಚಿಸಿರುವುದಾಗಿ ತಿಳಿಸಿದ ಅವರು, ಬಗರ್‌ಹುಕುಂ ಸಾಗುವಳಿ ಹಾಗೂ ಭೂ ಸುಧಾರಣಾ ಕಾಯ್ದೆಯಂತಹ ಕ್ರಮಗಳನ್ನು ಜಾರಿಗೆ ತಂದಿರುವುದು ತಮ್ಮ ಸರ್ಕಾರ ಎಂದು ಹೇಳಿದರು.
‘ಭಾವನೆಗಳ ಮೇಲೆ ನಮ್ಮ ರಾಜಕಾರಣ ಇಲ್ಲ; ಜನರ ಬದುಕಿನ ಮೇಲೆ ನಮ್ಮ ರಾಜಕಾರಣ. ನಿಮ್ಮೆಲ್ಲರ ಬದುಕು ನಮಗೆ ಮುಖ್ಯ. ಅಕ್ರಮ–ಸಕ್ರಮ ಹಾಗೂ ಪರಿಸರ ಸೂಕ್ಷ್ಮ ವಲಯದ ವಿಚಾರ ನನಗೆ ಅರಿವಿದೆ. ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿಯೂ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದೆ’ ಎಂದರು.
ಕರಾವಳಿಯ ಅರಣ್ಯ, ಸಮುದ್ರ, ಪರಿಸರ, ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಇಲ್ಲಿನ ಜನರ ಪರಿಶ್ರಮವನ್ನು ಕೊಂಡಾಡಿದ ಅವರು, ‘ತುಳುನಾಡು ದೇಶದ ದೊಡ್ಡ ಆಸ್ತಿ’ ಎಂದರು.
‘ಜನವಸತಿ ಪ್ರದೇಶ ಕೈಬಿಡಬೇಕು’:
ಮಲೆಕುಡಿಯ ಮುಖಂಡ ಶ್ರೀಧರ ಗೌಡ ಮಾತನಾಡಿ, ಜನನಿಬಿಡ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

‘ಕಾಡು, ನದಿ ಹಾಗೂ ಪರಿಸರವನ್ನು ಉಳಿಸಿಕೊಂಡು ಬಂದವರು ಮಲೆಕುಡಿಯರು. ನಮ್ಮ ಹಿತ ಕಾಪಾಡಬೇಕು. ಉಪಗ್ರಹ ಸರ್ವೇಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಭೌತಿಕ ಸರ್ವೇ ನಡೆಸಬೇಕು. ರಸ್ತೆ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳಿಗೂ ಸಮಸ್ಯೆಯಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಗೆ ಯಾವುದೇ ಚ್ಯುತಿ ಬರಬಾರದು’ ಎಂದು ಒತ್ತಾಯಿಸಿದರು.
‘ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಿ’:
ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಕಸ್ತೂರಿರಂಗನ್ ವರದಿ ಕುರಿತು ಕಳೆದ ಹತ್ತು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಈಗಾಗಲೇ ವಿವಿಧ ಅರಣ್ಯ ಕಾನೂನುಗಳಿಂದ ಸಮಸ್ಯೆ ಎದುರಿಸುತ್ತಿದ್ದು, ಕಸ್ತೂರಿರಂಗನ್ ವರದಿ ಮತ್ತಷ್ಟು ಆತಂಕ ಮೂಡಿಸಿದೆ ಎಂದರು.
‘ಅರಣ್ಯ ಪ್ರದೇಶವನ್ನು ಕಸ್ತೂರಿರಂಗನ್ ವ್ಯಾಪ್ತಿಗೆ ತರಬಹುದು. ಆದರೆ ಜನವಸತಿ ಪ್ರದೇಶಗಳನ್ನು ಕೈಬಿಡಬೇಕು. ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಿ ಭೌತಿಕ ಸರ್ವೇ ನಡೆಸಬೇಕು. ಜೋನಲ್ ಮ್ಯಾನೇಜ್‌ಮೆಂಟ್ ಪ್ಲಾನ್ ರೂಪಿಸಬೇಕು. ರೈಲ್ವೆ, ಕುಡಿಯುವ ನೀರು ಸೇರಿದಂತೆ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಪುನರ್ವಸತಿಗಾಗಿ ಸ್ಥಳಾಂತರಗೊಂಡವರಿಗೆ ಕಳೆದ ನಾಲ್ಕು ವರ್ಷಗಳಿಂದ ಆರ್ಥಿಕ ನೆರವು ಸಿಕ್ಕಿಲ್ಲ. ಇದು ಲಕ್ಷಾಂತರ ಜನರ ಸಮಸ್ಯೆಯಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಹೆಬ್ರಿಗೆ ತಾಲೂಕು ಆಸ್ಪತ್ರೆ ಅಗತ್ಯವಿದ್ದು, ಅದನ್ನು ಮೇಲ್ದರ್ಜೆಗೇರಿಸುವಂತೆಯೂ ಮನವಿ ಮಾಡಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳಿ, ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ನಾರಾಯಣಗುರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ವಾಗತಿಸಿದರು.