ಉಡುಪಿ: ನಗರದ ಉದ್ಯಾವರದಲ್ಲಿ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದು ಮನೆಯಲ್ಲಿಯೇ ಇದ್ದ ಇಬ್ಬರು ಮಕ್ಕಳನ್ನು ರಕ್ಷಿಸಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.
11 ವರ್ಷದ ನೇಹನ್ ಹಾಗೂ 8 ವರ್ಷದ ನೌರೋಜ್ ಎಂಬ ಮಕ್ಕಳು ಶಾಲೆಯಿಂದ ಹೊರಗುಳಿದು ಮನೆಯಲ್ಲಿಯೇ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜಸೇವಕ ಶ್ರೀ ನಿತ್ಯಾನಂದ ಒಳಕಾಡು ಅವರೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಜ್ವಲ್ ಹಾಗೂ ರಮ್ಯಾ, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಮತ್ತು ಅಕ್ಕ ಪಡೆಯ ಸಿಬ್ಬಂದಿಗಳಾದ ರಕ್ಷಿತಾ ಹಾಗೂ ವನಿತಾ ಅವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ರಕ್ಷಿಸಿದರು.
ಬಳಿಕ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ, ದೊಡ್ಡಣಗುಡ್ಡೆ, ಉಡುಪಿ ಮುಂದೆ ಹಾಜರುಪಡಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಇಬ್ಬರು ಮಕ್ಕಳಿಗೂ ಸರಕಾರಿ ಬಾಲಕರ ಬಾಲ ಮಂದಿರ, ದೊಡ್ಡಣಗುಡ್ಡೆ ಇಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.




