Home Dskshina Kannada ಕಡಬ: ಕೋಳಿ ಅಂಕ ಅಡ್ಡೆಗೆ ಪೊಲೀಸರ ದಾಳಿ : ಪ್ರಕರಣ ದಾಖಲು

ಕಡಬ: ಕೋಳಿ ಅಂಕ ಅಡ್ಡೆಗೆ ಪೊಲೀಸರ ದಾಳಿ : ಪ್ರಕರಣ ದಾಖಲು

ಕಡಬ: ಬಂಟ್ರ ಗ್ರಾಮದ ಗಾನದ ಕೊಟ್ಯ ಎನ್ನುವಲ್ಲಿ ಹಗಲು ಹೊತ್ತಿನಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಅಡ್ಡೆಯ ಮೇಲೆ ಕಡಬ ಪೊಲೀಸರು ದಾಳಿ ಮಾಡಿದ್ದು, ಕಾನೂನು ಬಾಹಿರವಾಗಿ ಹಣವನ್ನು ಪಣಕ್ಕಿಟ್ಟು ಜೂಜಾಡ ಮಾಡುತ್ತಿದ್ದವರು ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಕಾಲ್ಕಿತ್ತ ಘಟನೆ ಫೆ 10 ರಂದು ನಡೆದಿದೆ.

ಗಾನದ ಕೊಟ್ಯ ಎಂಬ ನಿರ್ಜನ ಪ್ರದೇಶದಲ್ಲಿ ಈ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಕಡಬ ಠಾಣೆಯ ಪೊಲೀಸರು ಸ್ಥಳಕ್ಕೆ ಲಗ್ಗೆ ಇಟ್ಟಾಗ ಅಲ್ಲಿ ಕೋಳಿ ಅಂಕಕ್ಕೆ ಸೇರಿದ ಜನ ಬೆಟ್ಟಿಂಗ್‌ ಮಾಡುತ್ತಿರುವುದು ಕಂಡು ಬಂದಿದೆ. ಆದರೆ ಪೊಲೀಸ್‌ ಜೀಪಿನ ಶಬ್ದ ಕೇಳುತ್ತಿದ್ದಂತೆ ಅಂಕದಲ್ಲಿದ್ದ ವ್ಯಕ್ತಿಗಳು ಕಾಡಿನ ಹಾದಿ ಹಿಡಿದು ಪರಾರಿಯಾಗಿದ್ದಾರೆ.

ಈ ಅಕ್ರಮ ಕೃತ್ಯಕ್ಕೆ ಸಂಬಂಧಪಟ್ಟಂತೆ ಬಂಟ್ರ ಗ್ರಾಮದ ಉಮೇಶ ಗೌಡ ಹಾಗೂ ಐತ್ತೂರು ಗ್ರಾಮದ ವಿನಯ ಸಿ ಸೇರಿ ಇತರರ ವಿರುದ್ಧ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ತಲೆಮರೆಸಿಕೊಂಡಿರುವ ವ್ಯಕ್ತಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.