Home Crime ಉಡುಪಿ: ನಕಲಿ ರಶೀದಿ ನೀಡಿ 83.1 ಗ್ರಾಂ ಚಿನ್ನ ಪಡೆದು ವಂಚನೆ ಆರೋಪ…!!

ಉಡುಪಿ: ನಕಲಿ ರಶೀದಿ ನೀಡಿ 83.1 ಗ್ರಾಂ ಚಿನ್ನ ಪಡೆದು ವಂಚನೆ ಆರೋಪ…!!

ಉಡುಪಿ: ನಕಲಿ ಹಣಕಾಸು ಸಂಸ್ಥೆಯ ರಶೀದಿ ನೀಡಿ 83.1 ಗ್ರಾಂ ಚಿನ್ನ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಕೆಳಾರ್ಕಳಬೆಟ್ಟುವಿನ 65 ವರ್ಷದ ಶ್ರೀನಿವಾಸ ಆಚಾರ್ಯ ಅವರು ಚಿನ್ನದ ಕೆಲಸ ಮಾಡಿಕೊಂಡಿದ್ದು, ಮೇ 21ರಂದು ಸುಮಾರು 83.1 ಗ್ರಾಂ ಚಿನ್ನವನ್ನು ಸುವಿಧಾ ಫೈನಾನ್ಸ್‌ ಅಂಡ್ ಇನ್‌ವೆಸ್ಟ್‌ಮೆಂಟ್‌ನಲ್ಲಿ ಅಡಮಾನ ಇಟ್ಟಿದ್ದರು.

ಫೈನಾನ್ಸ್‌ನಲ್ಲಿ ಬಡ್ಡಿ ಹೆಚ್ಚಿರುವುದನ್ನು ಗಮನಿಸಿದ ಅವರ ಪುತ್ರ ಶ್ರೀಕಾಂತ, ಪರಿಚಯದ ಆನಂದ ನಾಯ್ಕ್‌ ಎಂಬವರ ಮೂಲಕ ಮಂಜುನಾಥ ಪೂಜಾರಿ ಎಂಬಾತನನ್ನು ಪರಿಚಯಿಸಿದ್ದ ಎನ್ನಲಾಗಿದೆ.

ಮಂಜುನಾಥ ಪೂಜಾರಿ ಹಣ ನೀಡಿ ಸುವಿಧಾ ಫೈನಾನ್ಸ್‌ನಲ್ಲಿದ್ದ ಚಿನ್ನವನ್ನು ಬಿಡಿಸಿಕೊಂಡು, ಶ್ರೀನಿವಾಸ ಆಚಾರ್ಯರನ್ನು ಇಂಡಿಯನ್ ಓವರ್ಸೀಸ್ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಖಾತೆ ತೆರೆಯಿಸಿ, ಚಿನ್ನಾಭರಣದ ಫೋಟೋ ತೆಗೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಜುಲೈ 21, 2026ರ ದಿನಾಂಕ ಹೊಂದಿರುವ ಕೃಷ್ಣ ಫೈನಾನ್ಸ್‌ ಲಿಮಿಟೆಡ್‌ನ ನಕಲಿ ರಶೀದಿಯನ್ನು ನೀಡಿದ್ದಾನೆ ಎನ್ನಲಾಗಿದೆ. ಚಿನ್ನವನ್ನು ವಾಪಸ್ ಪಡೆಯಲು ಆರೋಪಿತನಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿರಲಿಲ್ಲ.

ರಶೀದಿಯಲ್ಲಿ ನಮೂದಿಸಿರುವ ಕೃಷ್ಣ ಫೈನಾನ್ಸ್‌ ಲಿಮಿಟೆಡ್‌ ಎಂಬ ಸಂಸ್ಥೆಯೇ ಅಸ್ತಿತ್ವದಲ್ಲಿಲ್ಲ ಎಂದು ಆರೋಪಿಸಲಾಗಿದೆ.

ಮಂಜುನಾಥ ಪೂಜಾರಿ ಹಾಗೂ ಆನಂದ ನಾಯ್ಕ್‌ ಅವರು ನಕಲಿ ದಾಖಲೆ ಸೃಷ್ಟಿಸಿ, ಮೋಸ ಹಾಗೂ ನಂಬಿಕೆ ದ್ರೋಹದ ಮೂಲಕ 83.1 ಗ್ರಾಂ ಚಿನ್ನ ಪಡೆದು ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಶ್ರೀನಿವಾಸ ಆಚಾರ್ಯ ಅವರು ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2026ರಂತೆ BNS ಕಲಂ 340(2), 316(2), 318(4) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.