ಬ್ರಹ್ಮಾವರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹1.50 ಲಕ್ಷ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ಬ್ರಹ್ಮಾವರದ ದಿನೇಶ್ ಅವರು ವಿದೇಶದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದ್ದ ವೆಬ್‌ಸೈಟ್‌ನಲ್ಲಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಜೂನ್ 20ರಂದು ಆರೋಪಿಗಳು ದಿನೇಶ್ ಅವರಿಗೆ ಕರೆ ಮಾಡಿ, ಚೆನ್ನೈನಿಂದ ವಿಷ್ಣುಮಣಿ ಹಾಗೂ ಶ್ರೀನಿವಾಸನ್ ಎಂಬ ಹೆಸರಿನಲ್ಲಿ ಮಾತನಾಡಿ ವೀಸಾ ಕೊಡಿಸುವುದಾಗಿ ನಂಬಿಸಿದ್ದರು. ಇದಕ್ಕಾಗಿ ಒಟ್ಟು ₹1.50 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ದರು.
ಆರೋಪಿಗಳ ಮಾತನ್ನು ನಂಬಿದ ದಿನೇಶ್, ಜುಲೈ 2ರಂದು ಮಗಳ ಬ್ಯಾಂಕ್ ಖಾತೆಯಿಂದ ಆರೋಪಿಗಳು ಸೂಚಿಸಿದ್ದ ವೃಷ್ಣಕುಪ್ಪ ಆರ್ಥಿ ಎಂಬವರ ಖಾತೆಗೆ ₹75 ಸಾವಿರವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದರು. ಅಳಿಯನ ಖಾತೆಯಿಂದ ಅಜಿತ್ ಕುಮಾರ್ ಎಂಬವರ ಹೆಸರಿನ ಬ್ಯಾಂಕ್ ಖಾತೆಗೆ ಮತ್ತೊಂದು ₹75 ಸಾವಿರವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಹಣ ಪಡೆದ ಬಳಿಕ ಆರೋಪಿಗಳು ವೀಸಾ ಕೊಡಿಸದೆ, ಸಂಪರ್ಕಕ್ಕೂ ಸಿಗದೆ ವಂಚಿಸಿರುವುದಾಗಿ ದಿನೇಶ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




