ಉಳ್ಳಾಲ : ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಹಿಂಬದಿ ವಾಹನ ಸವಾರ ಅಪಾಯದ ಮುನ್ಸೂಚನೆ ನೀಡಿದ ಪರಿಣಾಮ ಓಮ್ನಿ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ರಾ.ಹೆ.66 ರ ಕೋಟೆಕಾರು ಅಡ್ಕ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ತಲಪಾಡಿ ನಿವಾಸಿ ರಿಯಾಝ್ ಎಂಬವರು ಗುರುವಾರ ಮಧ್ಯಾಹ್ನ ಅಡ್ಕದ ಗ್ಯಾರೇಜ್ ಒಂದರಲ್ಲಿ ದುರಸ್ತಿಗೊಳಿಸಲಾಗಿದ್ದ ತನ್ನ ಓಮ್ನಿ ಕಾರನ್ನ ವಾಪಸು ಪಡೆದು ಪೆಟ್ರೋಲ್ ತುಂಬಿಸಿ ತಲಪಾಡಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಕಾರಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿ ಬೆಂಕಿ ಹತ್ತಿದ ವಿಚಾರ ರಿಯಾಝ್ ಅವರ ಗಮನಕ್ಕೆ ಬಂದಿಲ್ಲ. ಈ ವೇಳೆ ಹಿಂಬದಿ ವಾಹನ ಸವಾರರೋರ್ವರು ರಿಯಾಝ್ ಅವರಲ್ಲಿ ಕಾರಲ್ಲಿ ಬೆಂಕಿ ಹಚ್ಚಿಕೊಂಡಿರುವ ವಿಚಾರ ತಿಳಿಸಿದ್ದಾರೆ.
ತಕ್ಷಣವೇ ರಿಯಾಝ್ ಅವರು ಕಾರನ್ನ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಹೊರಗೋಡಿದ್ದಾರೆ. ಕ್ಷಣಾರ್ಧದಲ್ಲಿ ಕಾರಿಗೆ ಸಂಪೂರ್ಣ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಕಾರಿನಲ್ಲಿ ಟ್ಯಾಂಕ್ ತುಂಬಾ ಪೆಟ್ರೋಲ್ ಇದ್ದ ಪರಿಣಾಮ ಕಾರಿಗೆ ಬೆಂಕಿ ಹತ್ತಿರುವುದಾಗಿ ಶಂಕಿಸಲಾಗಿದೆ.




