ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್‌ನ ಅಲೆಖಾನ್
ರಾಷ್ಟ್ರೀಯ ಹೆದ್ದಾರಿ ಸಮೀಪ ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಪರ್ಸ್‌ವೊಂದು ಸಿಕ್ಕಿದ್ದು, ಅದನ್ನು ವಾರಸುದಾರರಿಗೆ ಸುರಕ್ಷಿತವಾಗಿ ಹಿಂತಿರುಗಿಸಲು ಮುಂದಾಗಿರುವ ಅಲೆಕಾನ್ ಗ್ರಾಮದ ಆಶಾ ಕಾರ್ಯಕರ್ತೆ ಪವಿತ್ರ ಅವರ ಪ್ರಾಮಾಣಿಕತೆ ಹಾಗೂ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತರೀಕೆರೆ ಮೂಲದ ಜಗದೀಶ್ ಅವರು ತಮ್ಮ ಮಗುವಿನ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮಂಗಳೂರಿನ ಏನೆಪೋಯ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ತೋರಿಸಿ, ಮಗುವನ್ನು ಡಿಸ್ಟಾರ್ಜ್ ಮಾಡಿಸಿಕೊಂಡು ತರೀಕೆರೆಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಮೂಡಿಗೆರೆ ಕಡೆಗೆ ಬರುತ್ತಿದ್ದರು. ಆಗಸ್ಟ್ 20ರಂದು ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಚಾರ್ಮಾಡಿ ಘಾಟ್‌ನ ಅಲೆಖಾನ್ ರಾಷ್ಟ್ರೀಯ ಹೆದ್ದಾರಿ ಸಮೀಪ ಪರ್ಸ್ ಕಳೆದುಕೊಂಡಿದ್ದರು. ಪರ್ಸ್‌ನಲ್ಲಿ ಸುಮಾರು 30 ಸಾವಿರ ನಗದು ಹಾಗೂ ಕೆಲವು ಪ್ರಮುಖ ದಾಖಲೆಗಳು ಇದ್ದವು ಎನ್ನಲಾಗಿದೆ.
ಇದೇ ವೇಳೆ ಅಲೆಖಾನ್ ರಾಷ್ಟ್ರೀಯ ಹೆದ್ದಾರಿ ಸಮೀಪ ಪರ್ಸ್‌ವೊಂದು ಸಿಕ್ಕಿದ್ದನ್ನು ಗಮನಿಸಿದ ಅಲೆಕಾನ್ ಗ್ರಾಮದ ಆಶಾ ಕಾರ್ಯಕರ್ತೆ ಪವಿತ್ರ ಅವರು ಅದನ್ನು ಸುರಕ್ಷಿತವಾಗಿ ತಮ್ಮ ಬಳಿ ಇಟ್ಟುಕೊಂಡು, ವಾರಸುದಾರರನ್ನು ಪತ್ತೆಹಚ್ಚಿ ಹಿಂತಿರುಗಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.




