Home Dskshina Kannada ಮಿನಿ ಬಳ್ಳಾರಿಯಾಗಲಿದೆಯೇ ಪಾಲಡ್ಕ ಗ್ರಾಮ : ಕುರುಡಾದ ಅಧಿಕಾರಿಗಳು..!!

ಮಿನಿ ಬಳ್ಳಾರಿಯಾಗಲಿದೆಯೇ ಪಾಲಡ್ಕ ಗ್ರಾಮ : ಕುರುಡಾದ ಅಧಿಕಾರಿಗಳು..!!

ಮೂಡಬಿದಿರೆ: ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಿಂದ ಬೃಹತ್ ಲಾರಿಗಳಲ್ಲಿ ಮಣ್ಣು ಸಾಗಟ ಮಾಡುತ್ತಿದ್ದು, ಕೇಮಾರು ಬಳಿಯ ಪ್ರದೇಶದಿಂದಲೂ ನಿರಂತರ ಮಣ್ಣು ಸಾಗಟದಿಂದ ರಸ್ತೆಯ ಅವಸ್ಥೆ ತೀರಾ ದುಸ್ತರವಾಗಿದೆ. ದಿನಂಪ್ರತಿ ಮಣ್ಣು ತುಂಬಿಕೊಂಡು ಹಾರಾಡುವ ನೂರಾರು ಬೃಹತ್ ಯಮಕಿಂಕರ ಲಾರಿಗಳ ಆರ್ಭಟದಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಪಾಲಡ್ಕದಿಂದ ಕೇಮಾರು ಮೂಲಕ ಕಾಂತಾವರ ದೇವಸ್ಥಾನ ಹಾಗೂ ಬೆಳುವಾಯಿಗೆ ಹೋಗಲು ಹತ್ತಿರದ ಈ ರಸ್ತೆಯಲ್ಲಿ ಯಮಕಿಂಕರ ಲಾರಿಗಳ ಹಾರಾಟದಿಂದ ಈಗ ಕೆಸರಿನ ಪ್ರಳಯವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ.

ದಿನಂಪ್ರತಿ ನೂರಾರು ಘನ ವಾಹನಗಳಲ್ಲಿ ಮಣ್ಣನ್ನು ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದ್ದು, ರಸ್ತೆಯನ್ನೇ ಮಾಯ ಮಾಡಿಬಿಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಅಂಗನವಾಡಿ, ಶಾಲೆ, ಭಜನಾ ಮಂದಿರ, ಹಾಲಿನ ಸೊಸೈಟಿ ಹಾಗೂ ಕೇಮಾರು ಸಾಂದೀಪನಿ ಸಾಧನಾಶ್ರಮ ಮಠವಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳ ಪಾಡು ಹೇಳತೀರದು. ಎಷ್ಟೋ ದ್ವಿಚಕ್ರ ವಾಹನಗಳು ಈ ಕೆಸರ ರಸ್ತೆಯಲ್ಲಿ ಅಪಘಾತಕ್ಕೀಡಾದ ಘಟನೆಗಳೂ ಇದೆ. ಇಷ್ಟಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನ ವಹಿಸಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳ ಮುಖಂಡರುಗಳೇ ಈ ಮಣ್ಣಿನ ಅದಿರಿನ ಸಾಗಾಟದ ನೇತೃತ್ವ ವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದು, ಇದನ್ನು ಕೂಡಲೇ ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.