ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಮ್ ನರ್ಸ್ ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯಡ್ತಾಡಿ ಗ್ರಾಮದ ಸೈಬರ್‌ಕಟ್ಟೆಯ ನಿವಾಸಿ ಭಾಗ್ಯಲಕ್ಷ್ಮೀ ಅವರ ದೂರಿನಂತೆ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತಿ ಶ್ರೀನಿವಾಸ ಪೂಜಾರಿ ಅವರ ಆರೈಕೆಗಾಗಿ ಉಡುಪಿಯ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯ ಮೂಲಕ ಸಚಿನ್ ಎಂಬ ಹೋಮ್ ಬ್ರದರ್‌ನನ್ನು ನೇಮಿಸಲಾಗಿತ್ತು.
ಈ ಸೇವೆಗಾಗಿ ಸಂಸ್ಥೆಗೆ ಮುಂಗಡವಾಗಿ 28 ಸಾವಿರ ರೂಪಾಯಿ ಪಾವತಿಸಲಾಗಿತ್ತು.ಆದರೆ, ಜುಲೈ 7ರಂದು ಅಗತ್ಯ ಕೆಲಸವಿದೆ ಎಂದು ಹೇಳಿ ಊರಿಗೆ ತೆರಳಿದ್ದ ಸಚಿನ್, ಬಳಿಕ ಮರಳಿ ಬಂದಿಲ್ಲ. ನಂತರ ಜುಲೈ 28ರಂದು ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಜೂನ್ 25ರಿಂದ ಜುಲೈ 7ರ ಅವಧಿಯಲ್ಲಿ ಪತಿಯ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಯುಪಿಐ ಮೂಲಕ ಹಂತ ಹಂತವಾಗಿ 1 ಲಕ್ಷ 60 ಸಾವಿರ 500 ರೂಪಾಯಿ ಹಣವನ್ನು ಅವರ ಗಮನಕ್ಕೆ ಬಾರದೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ವಿ ಕೇರ್ ಹೋಮ್ ನರ್ಸ್ ಸಂಸ್ಥೆಯನ್ನು ಸಂಪರ್ಕಿಸಿದಾಗ, ಸಚಿನ್ ಅವರೊಂದಿಗೆ ನಮಗೆ ಯಾವುದೇ ಸಂಬಂಧ ಇಲ್ಲ ಎಂದು ಸಂಸ್ಥೆ ತಿಳಿಸಿದೆ. ಇದರಿಂದ ಸಂಸ್ಥೆ ಹಾಗೂ ಸಚಿನ್ ಸೇರಿ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




