Home Latest ಮೃತ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ನಾಪತ್ತೆ : ದೂರು ದಾಖಲು…!!

ಮೃತ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ನಾಪತ್ತೆ : ದೂರು ದಾಖಲು…!!

ಮಂಗಳೂರು : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಮೃತಪಟ್ಟ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ನಾಪತ್ತೆಯಾಗಿದೆ ಎಂದು ಆರೋಪಿಸಿ ಮಹಿಳೆಯ ಪತಿ ಆ.1ರ ಶನಿವಾರ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಶಕ್ತಿನಗರ ನಿವಾಸಿ ಸುಂದರ ಪೂಜಾರಿ ಅವರ ಪತ್ನಿ ಜಾನಕಿ (53) ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತತ್‌ಕ್ಷಣ ಅವರನ್ನು ರಿಕ್ಷಾದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಹೃದ್ರೋಗ ತಜ್ಞರು ಲಭ್ಯವಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತುರ್ತು ಚಿಕಿತ್ಸ ವಿಭಾಗದಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಜಾನಕಿ ಅವರು ಮೃತಪಟ್ಟಿರುವುದು ತಿಳಿಸಿದ್ದಾರೆ.

ದೂರಿನಲ್ಲಿರುವ ವಿವರದಂತೆ, ಆಸ್ಪತ್ರೆಗೆ ದಾಖಲಿಸುವ ವೇಳೆ ಜಾನಕಿ ಅವರ ಕುತ್ತಿಗೆಯಲ್ಲಿ ಸುಮಾರು 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಇತ್ತು. ಆದರೆ ಮೃತದೇಹವನ್ನು ಬಳಿಕ ಪರಿಶೀಲಿಸಿದಾಗ ಕರಿಮಣಿ ಸರ ಕಾಣಿಸದಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಚಿನ್ನದ ಕರಿಮಣಿ ಸರವನ್ನು ಯಾರು ತೆಗೆದಿದ್ದಾರೆ ಎನ್ನುವುದನ್ನು ಪತ್ತೆಹಚ್ಚಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.