ಕಾರವಾರ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಲಾರಿ ಹಾಗೂ ತೂಫಾನ್ ಕಮರ್ಷಿಯಲ್ ವಾಹನದ ನಡುವೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ‘ಸ್ವಿಗ್ಗಿ’ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ತೂಫಾನ್ ವಾಹನದಲ್ಲಿದ್ದ ಆರು ಜನರು ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಬಸವರಾಜ್ (48 ವರ್ಷ), ಅಭಿಷೇಕ್ ಈಶ್ವರ್ (28 ವರ್ಷ), ಅಕ್ಷಯ (26 ವರ್ಷ), ಅಭಿಷೇಕ್ (26 ವರ್ಷ), ಸಂಜೀವ/ಸಂಜಯ ಅಂಗಡಿ (33 ವರ್ಷ – ವಾಹನ ಚಾಲಕ), ಮಂಜುನಾಥ ಚುಲಕಿ (32 ವರ್ಷ) ಎಂದು ಗುರುತಿಸಲಾಗಿದೆ.
ಧಾರವಾಡದಿಂದ ರಾತ್ರಿ ವೇಳೆ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿದ್ದಾಗ ಈ ಘೋರ ದುರಂತ ಸಂಭವಿಸಿದೆ. ತೂಫಾನ್ ವಾಹನದಲ್ಲಿ (KA19AA5920) ಚಾಲಕ ಸೇರಿದಂತೆ ಒಟ್ಟು 9 ಜನರಿದ್ದರು. ಅರಬೈಲ್ ಘಾಟ್‌ನ ಬಳಗಾರ್ ತಲುಪುತ್ತಿದ್ದಂತೆ ತೂಫಾನ್ ವಾಹನ ಹಾಗೂ ಲಾರಿ (KA22AA1008) ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.




