Home Karavali Karnataka ನ. 29: ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ-ವಿರಾಸತ್ ಸಾಂಸ್ಕೃತಿಕ ವೈಭವ…!!

ನ. 29: ಕಾರ್ಕಳದಲ್ಲಿ ಆಳ್ವಾಸ್ ನುಡಿಸಿರಿ-ವಿರಾಸತ್ ಸಾಂಸ್ಕೃತಿಕ ವೈಭವ…!!

ಕಾರ್ಕಳ : ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನ.29ರ ಶನಿವಾರದಂದು ಸಂಜೆ 5:45ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮೇಳೈಸಲಿದೆ ಎಂದು ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ಉದ್ಯಮಿ ವಿಜಯ ಶೆಟ್ಟಿ ತಿಳಿಸಿದ್ದಾರೆ.

ಕಾರ್ಕಳದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಉದ್ಘಾಟಿಸಿದರೆ, ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಗೌರವಾಧ್ಯಕ್ಷ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ, ಆಳ್ವಾಸ್ ನುಡಿಸಿರಿ-ವಿರಾಸತ್ ರೂವಾರಿ ಡಾ. ಎಂ. ಮೋಹನ್ ಆಳ್ವ ಹಾಗೂ ಸಮಾಜದ ಎಲ್ಲಾ ಸ್ಥರಗಳ ಪ್ರಮುಖರು ಸಭಾ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿ ಹಾಜರಿರಲಿದ್ದಾರೆ. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೀರ್ತಿಶೇಷ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ನ್ಯಾಯವಾದಿ ದಿವಂಗತ ಎಂ. ಕೆ ವಿಜಯ ಕುಮಾರ್‌ರವರಿಗೆ ಅರ್ಪಿಸಲಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ-ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದ ಆರಂಭದಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಗಾರಿ ಮೇಳ ಪ್ಯೂಷನ್ ವಿನೋದಾವಳಿಯೊಂದಿಗೆ ನಡೆಯಲಿದೆ. ಆಕರ್ಷಕ ಬೊಂಬೆ ಸಿಡಿಮದ್ದಿನ ಪ್ರದರ್ಶನವಿರಲಿದೆ. ಪ್ರೇಕ್ಷಕರಿಗಾಗಿ 15000ಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರಲಿದೆ. ಸಾಂಸ್ಕೃತಿಕ ಕಾರ್ಯಕ್ರಮವು ಕ್ಲಪ್ತ ಸಮಯಕ್ಕೆ ಆರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಪ್ರಸಾದ್ ಶೆಟ್ಟಿ, ಕಾರ್ಯಕ್ರಮದ ಸಂಘಟಕ ಅಂಬರೀಶ್ ಚಿಪ್ಳುಣ್ಕರ್, ಕಾಲೇಜಿನ ಕೋಶಾಧಿಕಾರಿ ಎಸ್. ಪಾರ್ಶ್ವನಾಥ್ ಉಪಸ್ಥಿತರಿದ್ದರು.