ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದಲ್ಲಿ ನಡೆದ ಘಟನೆ ಪ್ರದೇಶದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ದೂರುದಾರರದ ಅಜಿತ್ ಕುಮಾರ್ ಶೆಟ್ಟಿ (32) ಅವರ ನಿವಾಸಕ್ಕೆ ಶಸ್ತ್ರಸಜ್ಜಿತವಾಗಿ ಅಕ್ರಮ ಪ್ರವೇಶ ಮಾಡಿ ಕುಟುಂಬದವರನ್ನು ಜೀವಭೀತಿಗೆ ಒಳಪಡಿಸಿರುವ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ ಫೆ.07 ರಂದು ಸಂಜೆ ಕಟ್ಕೇರೆ ನಿವಾಸಿ ಮೇಘರಾಜ್ ಶೆಟ್ಟಿ, ಜೀವನ್ ಶೆಟ್ಟಿ, ವಂಡ್ಸೆ ನಿವಾಸಿ ಗೋಪಾಲ ಶೆಟ್ಟಿ ಹಾಗೂ ಕೊಯ್ಕೂರು ನಿವಾಸಿ ಸಂದೀಪ ಶೆಟ್ಟಿ ಎಂಬವರು ತಲವಾರು ಮತ್ತು ಚೂರಿ ಹಿಡಿದು ಮನೆಗೆ ನುಗ್ಗಿದ್ದಾರೆ.
ಮನೆಗೆ ಅಕ್ರಮ ಪ್ರವೇಶ ಮಾಡಿದ ಆರೋಪಿತರು, ಎಲ್ಲಾ ಕೊಠಡಿಗಳೊಳಗೆ ಹೋಗಿ ಅಜಿತ್ ಕುಮಾರ್ ಶೆಟ್ಟಿ ಅವರನ್ನು ಹುಡುಕಾಡಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಅಜಿತ್ ಕುಮಾರ್ ಶೆಟ್ಟಿ ಅವರ ಹೆಂಡತಿ ಮತ್ತು ಅತ್ತೆಯನ್ನು ಪ್ರಶ್ನಿಸಿದಾಗ, ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನ ಗಂಡ ಅಜಿತ್ ಶೆಟ್ಟಿ ಎಲ್ಲಿ? ಅವನು ಹಾರಾಟ ಜಾಸ್ತಿ ಮಾಡ್ತಾ ಇದ್ದಾನೆ, ತಾಕತ್ ಇದ್ರೆ ಇಲ್ಲಿಗೆ ಬರಲು ಹೇಳು, ಇಲ್ಲಿಯೇ ಕಡಿದು ಹಾಕ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



