ಕಾರ್ಕಳ: ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಕೊಲ್ಲೊಟ್ಟು ಗ್ರಾಮದ ಪ್ರಸಾದ್ ರಾಜು ಶೆಟ್ಟಿ (46) ಅವರು ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಜೂನ್ 29ರಂದು ಕಾರ್ಕಳಕ್ಕೆ ಆಗಮಿಸಿದ್ದರು.
ಜುಲೈ 2ರಂದು ರಾತ್ರಿ ಅರ್ಚನಾ ಬಾರ್‌ನಲ್ಲಿ ಊಟ ಮುಗಿಸಿ ಕೆಪ್ಲಬೆಟ್ಟುವಿನಲ್ಲಿರುವ ತಮ್ಮ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ರಾತ್ರಿ ಸುಮಾರು 11 ಗಂಟೆಗೆ ಕೌಡೂರು ಗ್ರಾಮದ ಕೆಪ್ಲಬೆಟ್ಟು ಮೋರಿಯ ಬಳಿ ಪರಿಚಿತರಾದ ಶೈಲು ಮತ್ತು ಪ್ರವೀಣ್ ಶೆಟ್ಟಿಯವರೊಂದಿಗೆ ಮಾತನಾಡುತ್ತಿದ್ದರು.
ಈ ವೇಳೆ ಕಾರಿನಲ್ಲಿ ಬಂದ ಆರೋಪಿಯು ಸಂಬಂಧಿಕ ಯುವತಿಯ ಪ್ರೀತಿಯ ವಿಚಾರದಲ್ಲಿ “ನನಗೆ ಏಕೆ ಬೈದಿದ್ದೀರಿ?” ಎಂದು ಪ್ರಶ್ನಿಸಿ, ದೊಣ್ಣೆಯಿಂದ ಪ್ರಸಾದ್ ರಾಜು ಶೆಟ್ಟಿಯವರ ತಲೆ ಹಾಗೂ ಎಡಕೈಗೆ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 118(1), 351(2) ಹಾಗೂ 352 ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




