ಉಡುಪಿ : ನಗರದ ಬ್ರಹ್ಮಗಿರಿ ವೃತ್ತದಿಂದ, ಬನ್ನಂಜೆ ನಾರಾಯಣ ಗುರು ವೃತ್ತವನ್ನು ಸಂಪರ್ಕಿಸುವ ಡಾ. ಜಿ ಶಂಕರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.
ಡಾಮರು ಕಿತ್ತುಹೋಗಿದ್ದು, ಗುಂಡಿಗಳು ಬಿದ್ದುಕೊಂಡಿವೆ. ವಾಹನಗಳ ಚಾಲಕರು ಗುಂಡಿ ತಪ್ಪಿಸಲು ಹೋಗಿ, ವಾಹನ ನಿಯಂತ್ರಣ ಸಿಗದೆ ಅಪಘಾತಗಳು ಸಂಭವಿಸುತ್ತಿರುತ್ತವೆ.
ಈ ರಸ್ತೆಯು ಪ್ರಮುಖ ರಸ್ತೆ ಆಗಿರುವುದರಿಂದ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ತಾಲೂಕು ಕಛೇರಿ, ಸರಕಾರಿ ಪ್ರವಾಸಿ ಬಂಗ್ಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿ, ಹಾಗೂ ಇನ್ನಿತರ ಸರಕಾರಿ ಕಛೇರಿಗಳು ಇಲ್ಲಿವೆ.
ಧೂಳೇಳುತ್ತಿರುವ ರಸ್ತೆಯಲ್ಲಿ ನಡೆದು ಸಾಗುವ ಸಾರ್ವಜನಿಕರಿಗೆ ಕಣ್ಣಿನ ಶ್ವಾಸಕೋಶದ ತೊಂದರೆಗಳು ಬಾಧಿಸುವ ಸಾದ್ಯತೆಗಳು ಇಲ್ಲಿವೆ. ಬರುವ ನ.28, ರಂದು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಗೆ ಆಗಮಿಸಲಿದ್ದು, ಆ ಸಂದರ್ಭ ಕೇಂದ್ರದ ಮಂತ್ರಿ ಮಹೋದಯರು ಪ್ರವಾಸಿ ಮಂದಿರದಲ್ಲಿ ವಿಶ್ರಮಿಸಲಿರುವರೆಂದು ತಿಳಿದುಬಂದಿದೆ.
ಬೆಂಗಾವಲು ಪಡೆಯ ವಾಹನಗಳು, ಮಂತ್ರಿಗಳ ವಾಹನಗಳು ಇದೇ ಅಸುರಕ್ಷಿತ ರಸ್ತೆಯಲ್ಲಿ ಹಾದುಹೋಗ ಬೇಕಾಗುತ್ತದೆ. ತಕ್ಷಣ ಜಿಲ್ಲಾಡಳಿತವು ಡಾ. ಜಿ ಶಂಕರ್ ರಸ್ತೆಯನ್ನು ದುರಸ್ತಿಪಡಿವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.




