ಉಡುಪಿ : ಮಲ್ಪೆ ಬಂದರು ವ್ಯಾಪ್ತಿಯ 37,554.55 ಚದರ ಮೀಟರ್ ಭೂಮಿ ಉಡುಪಿ ಶಾಸಕರ ಅಧ್ಯಕ್ಷತೆಯ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವುದು ಖಂಡನಾರ್ಹ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಜಾಗವನ್ನು ಮಲ್ಪೆಯ 5 ಭಜನಾ ಮಂಡಳಿಗಳನ್ನು ಒಳಗೊಂಡ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ನೀಡಲು ರಘುಪತಿ ಭಟ್ ಆಗ್ರಹಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡದ ಕಾಂಗ್ರೆಸ್ ಸರ್ಕಾರ ಶಾಸಕರ ಅಧ್ಯಕ್ಷತೆಯ ಫೆಡರೇಷನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ ದೊರಕಿದ್ದು ಹೇಗೆ?
ಶಾಸಕರ ಸ್ವಂತ ಲಾಭದ, ಸ್ವ ಹಿತಾಸಕ್ತಿಯ ಕೆಲಸಕ್ಕೆ ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ನಡೆಯಿತೆ.
ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ದೂರುವ ಉಡುಪಿ ಶಾಸಕರು ಸ್ವಂತ ಲಾಭದ ಕೆಲಸಕ್ಕೆ ಕಾಂಗ್ರೆಸ್ ನೊಂದಿಗೆ ಒಳಉಪ್ಪಂದ ಮಾಡಿಕೊಂಡರೆ ಎಂದು ರಘುಪತಿ ಭಟ್ ಪ್ರಶ್ನೆ ಮಾಡಿದ್ದಾರೆ.
ಉಡುಪಿಯ ಮಲ್ಪೆ ಬಂದರು ವ್ಯಾಪ್ತಿಯ 37554.55 ಚದರ ಮೀಟರ್ ಅಂದರೆ ಸರಿ ಸುಮಾರು 9.50 ಎಕರೆ ವಿಸ್ತೀರ್ಣದ ಬಂದರು ಭೂಮಿಯನ್ನು ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿಯಮಿತ ಮುಲಿಹಿತ್ಲು, ಬೋಳಾರ್, ಮಂಗಳೂರು ಇವರಿಗೆ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಕರ್ನಾಟಕ ಜಲ ಸಾರಿಗೆ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿ ಅನುಮೋದನೆ ನೀಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಉಡುಪಿಯ ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಜಾಗವು ಟೆಬ್ಮಾ ಶಿಫ್ ಯಾರ್ಡ್ ಹಿಂದಿರುವ ಸಿವಾಕ್ ಮತ್ತು ಹನುಮಾನ್ ವಿಠೋಭ ಭಜನಾ ಮಂದಿರದ ಸಮೀಪವಿದ್ದು, ಇದನ್ನು ಮೀನುಗಾರಿಕಾ ಉದ್ದೇಶವೆಂದು ಮೀನುಗಾರಿಕಾ ಫೆಡರೇಷನ್ ಗೆ ಗುತ್ತಿಗೆ ನೀಡಿರುವುದು ಸ್ಥಳೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಹಿಂದೆ ಉಡುಪಿಗೆ ಭೇಟಿ ನೀಡಿದ್ದ ಕೇಂದ್ರ ಮೀನುಗಾರಿಕಾ ಸಚಿವರಾದ ಮುರುಗನ್ ಅವರು ಮೀನುಗಾರಿಕಾ ಸಂಘದ ಮೂಲಕ ಈ ಭಾಗದಲ್ಲಿ 4ನೇ ಹಂತದ ಬಂದರು ಮಾಡುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹನುಮಾನ್ ವಿಠೋಬಾ ಭಜನಾ ಮಂದಿರದವರು ಮತ್ತು ಅಯ್ಯಪ್ಪ ಭಜನಾ ಮಂದಿರದವರು ಇಲ್ಲಿ ಜಾಗ ಮಂಜೂರಾತಿಗೆ ಕೋರಿರುವಂತೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮನವಿ ನೀಡಿದ್ದು, ಅದು ಇರುವಂತೆ ಇಷ್ಟು ವಿಸ್ತೀರ್ಣದ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆ ಎಂದು ಫೆಡರೇಷನ್ ಗೆ ನೀಡಿರು ಎಂದು ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.





