Home Karavali Karnataka ಎಲ್ಲಿಯೋ ಕುಳಿತು ಆರೋಪ ಮಾಡಿದರೆ ಉತ್ತರ ಕೊಡಲು ನಾನು ಅವರ ಜನ ಅಲ್ಲ : ತನ್ನ...

ಎಲ್ಲಿಯೋ ಕುಳಿತು ಆರೋಪ ಮಾಡಿದರೆ ಉತ್ತರ ಕೊಡಲು ನಾನು ಅವರ ಜನ ಅಲ್ಲ : ತನ್ನ ವಿರುದ್ದದ ಆರೋಪಕ್ಕೆ ಸ್ಪೀಕರ್ ಖಾದರ್ ತಿರುಗೇಟು…!!

ಮಂಗಳೂರು : ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪ ವಿಚಾರ ಗಮನಕ್ಕೆ ಬಂದಿದೆ. ಎಲ್ಲಾ ರೋಗಕ್ಕೆ ಮದ್ದಿದೆ ಆದರೆ ಅಸೂಯೆಗೆ ಮದ್ದಿಲ್ಲ ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದರು.

ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಹೊಸದಾಗಿ ಮನೆ ಕಟ್ಟುವಾಗ ಅದಕ್ಕೆ ಕಣ್ಣು ಬೀಳಬಾರದೆಂದು ದೃಷ್ಟಿ ಗೊಂಬೆ ಹಾಕುತ್ತೇವೆ. ಕರ್ನಾಟಕ ಶಾಸಕಾಂಗದ ಬಗ್ಗೆ ರಾಜ್ಯದಲ್ಲಿ, ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೌರವ ವ್ಯಕ್ತವಾಗುತ್ತದೆ. ಇಷ್ಟೆಲ್ಲ ಒಳ್ಳೆಯ ಕಾರ್ಯ ಆಗುವಾಗ ಅದಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪ ಮಾಡಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಸ್ಪೀಕರ್ ಖಾದರ್ ವಿರುದ್ಧ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಭರತ್ ಶೆಟ್ಟಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ನಿರಂತರ, ಹಂತ ಹಂತವಾಗಿ ಅದನ್ನು ನಾನು ಮಾಡುತ್ತಾ ಇರುತ್ತೇನೆ. ಯಾರಿಗಾದರೂ ಅದರ ಸಂಶಯವಿದ್ದರೆ ಬರಹ ರೂಪದಲ್ಲಿ ಕೊಟ್ಟರೆ ಅದಕ್ಕೆ ಸಕರಾತ್ಮಕ ಉತ್ತರ ದೊರೆಯಲಿದೆ. ಆ ಬಗ್ಗೆ ಸಕಾರಾತ್ಮಕ ಚರ್ಚೆಗೆ ಸಿದ್ದನಿದ್ದೇನೆ. ಎಲ್ಲಿಯೋ ಕುಳಿತು ಆರೋಪ ಮಾಡಿದರೆ ಅದಕ್ಕೆ ಉತ್ತರ ಕೊಡಲು ನಾನು ಅವರ ಜನ ಅಲ್ಲ. ತನಿಖೆಗೆ ಕೊಡಬೇಕೋ ಬೇಡವೋ ಎಂದು ನಾನು ತೀರ್ಮಾನ ಮಾಡುತ್ತೇನೆ ಎಂದರು.

ರಾಜಕೀಯ ವ್ಯಕ್ತಿಯಾಗಿ ನಾನು ಕೂಡ ಏನನ್ನೂ ಮಾತಾಡಬಹುದು, ಆದರೆ ನಾನು ಸಂವಿದಾನ ಬದ್ಧ ಸ್ಪೀಕರ್ ಸ್ಥಾನದಲ್ಲಿದ್ದೇನೆ. ನಾನೀಗ ಪ್ರತಿ ಪಕ್ಷದ ಮಿತ್ರ, ನಮ್ಮ ಶಾಸಕರಿಗೆ ಯಾವುದೆಲ್ಲ ಒಳ್ಳೆಯದಾಗಬೇಕು, ಯಾವ ಸವಲತ್ತು ಕೊಡಬೇಕು ಅದನ್ನು ಕೊಡುವುದು ನನ್ನ ಕರ್ತವ್ಯ. ಮುಂದೆ ಕೂಡ ನಾನು ಮಾಡುತ್ತೇನೆ. ಇಂತಹ ಆರೋಪ ಮಾಡಿ ನನಗೆ ಡ್ಯಾಮೇಜ್ ಮಾಡುವದರಿಂದ ಅವರಿಗೆ ಸಂತೋಷವಾದರೆ ಆಗಲಿ ಎಂದರು.

ನನಗೆ ಯಾವುದೇ ಬೇಸರವಿಲ್ಲ, ನಾನು ಏನು ಹೇಗೆ ಎನ್ನುವುದು ಗೊತ್ತಿದೆ. ನನ್ನ ವಿರುದ್ಧ ಆರೋಪ ಇದು ಮೊದಲೇನಲ್ಲ. ನನ್ನ ರಾಜಕೀಯದುದ್ದಕ್ಕೂ ಈ ರೀತಿಯ ಆರೋಪ ಮಾಡಿದ್ದಾರೆ. ನಾನು ಮೊದಲ ಬಾರಿಯ ಶಾಸಕ ಆದಾಗಿಂದ ಈ ರೀತಿಯ ಮಾತು ಕೇಳಿದ್ದೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.