ಉಡುಪಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಪರಿಚಿತ ಮಹಿಳೆಯನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಸೋಮವಾರ ನಡೆದಿದೆ.
ಕಡಿಯಾಳಿಯಲ್ಲಿ ಖಾಸಗಿಯವರ ನಿರ್ಮಾಣ ಹಂತದಲ್ಲಿರುವ ವಸತಿ ಕಟ್ಟಡದ ಬಳಿ, ಮಹಿಳೆಯೊಬ್ಬರು, ಬೊಬ್ಬಿಡುತ್ತ ಹೊರಳಾಡುತ್ತಿದ್ದರು. ಮಾಹಿತಿ ಪಡೆದ ನಗರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಬಡಿಗೇರಿ ಹಾಗೂ ಮುಖ್ಯ ಆರಕ್ಷಕ ಸಂತೋಷ್ ಅವರು, ಮಹಿಳೆಯ ರಕ್ಷಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದರು.
ತಕ್ಷಣ ನೆರವಿಗೆ ಬಂದ ಒಳಕಾಡುವರು ಸ್ಥಳೀಯ ಮಹಿಳೆಯರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಅಂಬುಲೆನ್ಸ್ ವಾಹನದಲ್ಲಿ ಸಾಗಿಸಿ ದಾಖಲುಪಡಿಸಿದರು.
ದಾಖಲು ಪ್ರಕ್ರಿಯೆ ನಡೆಸುವಾಗ ಮಹಿಳೆ ತನ್ನ ಹೆಸರು ಪದ್ಮಾವತಿ (48ವ), ಹುಬ್ಬಳ್ಳಿಯ ನಿವಾಸಿ ಎಂದು ಹೇಳಿಕೊಂಡಿದ್ದಾರೆ.
ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆ ಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.