ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಮತ್ತಷ್ಟು ಕಾಲಾವಕಾಶ ನೀಡಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ರದ್ದುಕೋರಿ ಅಪರಾಧಿಗಳಾದ ವಿನಯ್ ಕುಲಕರ್ಣಿ (ಎ15) ಹಾಗೂ ಚಂದ್ರಶೇಖರ್ ಇಂಡಿ ಅಲಿಯಾಸ್ ಚಂದು ಮಾಮ (ಎ16) ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಬಿಐ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕಾಗಿದ್ದು, ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿತು.
ಇನ್ನು ಇದೇ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರೀಕರ (ಎ19) ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರಿಗೆ ಐಪಿಸಿ ಸೆಕ್ಷನ್ 218 (ಶಿಕ್ಷೆಯಿಂದ ವ್ಯಕ್ತಿಯನ್ನು ಉಳಿಸುವ ಉದ್ದೇಶದಿಂದ ಸಾರ್ವಜನಿಕ ನೌಕರನು ತಪ್ಪು ದಾಖಲೆ ಅಥವಾ ಬರವಣಿಗೆ ಸಿದ್ಧಪಡಿಸುವುದು) ಜತೆಗೆ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಹಾಗೂ ಸೆಕ್ಷನ್ 149 (ಅಕ್ರಮ ಕೂಟ) ಅಡಿಯ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನು ನೀಡಬಹುದಾದ ಅಪರಾಧಗಳಾಗಿವೆ. ಜಾಮೀನು ಅರ್ಹ ಅಪರಾಧಗಳಲ್ಲಿ ಶಿಕ್ಷೆ ಅಮಾನತು ಕೋರಿ ಮೇಲ್ಮನವಿ ಸಲ್ಲಿಸಿದ ನಂತರವೂ ಕಸ್ಟಡಿಯಲ್ಲಿ ಇರಿಸಲು ಸಾಧ್ಯವಿಲ್ಲ. ಆದ್ದರಿಂದ, ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಟಿಂಗರೀಕರ ಅವರ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬಹುದು ಎಂದು ತಿಳಿಸಿ, ಅರ್ಜಿ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು.




