ಹಿರಿಯಡ್ಕ: ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರನ್ನು ಕುರ್ಕಲ್ ಉಡುಪಿಯ ಸುಹಾಸ್(21) ಹಾಗೂ ಕಾಪು ಭಾರತನಗರದ ಲವ ಶೆಟ್ಟಿ(64) ಎಂದು ಗುರುತಿಸಲಾಗಿದೆ.
ಇವರು ಪೆರ್ಡೂರು ಕಡೆಯಿಂದ ಹಿರಿಯಡ್ಕ ಕಡೆಗೆ ಬೋಲೇರೊ ಟೆಂಪೋ ಗೂಡ್ಸ್ ವಾಹನದಲ್ಲಿ ನಾಲ್ಕು ಜಾನುವಾರುಗಳನ್ನು ಸಾಗಿಸುತ್ತಿದ್ದು, ಅವುಗಳಿಗೆ ಆಹಾರ ಹಾಗೂ ನೀರು ನೀಡದೇ, ಒಂದಕ್ಕೊಂದು ತಾಗಿ ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಿ ಮಾಂಸ ಮಾಡುವ ಉದ್ದೇಶ ಹೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಕ್ಕಾಲು ಹೆಬ್ಬಾರು ಸೇತುವೆ ಸಮೀಪ ಚರಂಡಿಗೆ ಇಳಿಸಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




