ಉಡುಪಿ : ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆನ್ನುವ ಉದ್ದೇಶದಿಂದಾಗಿ ಗೋ ಮಾತೆಯ ಗೌರವದ ಅಭಿಯಾನವನ್ನು ಹಮ್ಮಿಕೊಂಡಿದ್ದು, ಎ. 27ರಂದು ಉಡುಪಿ ಜಿಲ್ಲೆಯ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಸಾಯಿ ಈಶ್ವರ್ ಗುರೂಜಿ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ವ್ಯಕ್ತಿಗತವಾದ ಹೋರಾಟವಾಗಿರದೆ ಗೋ ಮಾತೆಯನ್ನು ಮುಂದಿಟ್ಟು ನಡೆಯುವ ಅಭಿಯಾನ ಇದಾಗಿದೆ.
ದೇಶದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಿಸಬೇಕೆನ್ನುವ ಉದ್ದೇಶದಿಂದ ನಾಲ್ಕು ಹಂತದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜುಲೈ ನಲ್ಲಿ ಜಿಲ್ಲಾ ಮಟ್ಟ, ಅಕ್ಟೋಬರ್ ನಲ್ಲಿ ರಾಜ್ಯ ಮಟ್ಟ ಹಾಗು ಡಿಸೆಂಬರ್ ನಲ್ಲಿ ಕೇಂದ್ರ ಮಟ್ಟದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂಧಿಸದೇ ಇದ್ದಲ್ಲಿ ಸಾಧು ಸಂತರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದರು.
ಸಂಚಾಲಕ ವಿಜಯ ಕೊಡವೂರು ಮಾತನಾಡಿ, ಈಗಿನ ಕಾಲದಲ್ಲಿ ಗೋ ಸಾಕುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ದನ ಕರುಗಳನ್ನು ರಸ್ತೆಗೆ ಬಿಡಲಾಗುತ್ತಿದೆ.
ರಸ್ತೆ ಬದಿಯಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ಗಳನ್ನು ತಿಂದು ಜಾನುವಾರುಗಳು ಅಸು ನೀಗುತ್ತಿವೆ. ಇನ್ನು ಬೀಡಾಡಿ ದನಗಳು ಕಟುಕರ ಪಾಲಾಗುತ್ತಿವೆ. ಇದನ್ನು ಮನಗಂಡು ತಾಲೂಕು ಮಟ್ಟದಲ್ಲಿ ಅಭಿಯಾನ ಆರಂಭಿಸಲಾಗಿದೆ. ಗೋವಿನ ವಧೆ ನಿಲ್ಲಬೇಕು. ಗೋವಿಗೆ ರಾಷ್ಟ್ರೀಯ ಸ್ಥಾನಮಾನ ಸಿಗಬೇಕು ಎನ್ನುವ ಉದ್ದೇಶದಿಂದ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಗೋವು ವಧೆ ಸರ್ಕಾರದ ಮೂಲಕ ನಿಲ್ಲಬೇಕು. ಇದಕ್ಕಾಗಿ ಸೂಕ್ತ ಕಾನೂನು ತರಬೇಕು. ಅಲ್ಲದೇ ಸಮಾಜ ಜಾಗೃತ ಆಗಬೇಕು ಎನ್ನುವ ಉದ್ದೇಶದಿಂದ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ರಾಘವೇಂದ್ರ ಪ್ರಭು ಕರ್ವಾಲು, ಗಜೇಂದ್ರ ಎಸ್. ಬೇಲೆಮನೆ ಹಾಗೂ ನಾಗರಾಜ್ ಬೈಂದೂರು ಉಪಸ್ಥಿತರಿದ್ದರು.





