ಬೆಂಗಳೂರು : ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯಾಗಿಸಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಕೃಷ್ಣ ಜೆ. ರಾವ್ ವಿರುದ್ಧದ ಕ್ರಿಮಿನಲ್ ಪ್ರಕರಣದ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಆದರೆ, ಈ ತಡೆಯಾಜ್ಞೆಗೆ ನ್ಯಾಯಾಲಯವು ಸಂತ್ರಸ್ತೆ ಮತ್ತು ಮಗುವಿನ ನಿರ್ವಹಣೆಗಾಗಿ ಪ್ರತಿ ತಿಂಗಳು ಹಣ ಪಾವತಿಸಬೇಕು ಎಂಬ ಕಠಿಣ ಷರತ್ತನ್ನು ವಿಧಿಸಿದೆ.
ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ, ಮದುವೆಯಾಗುವ ಭರವಸೆ ನೀಡಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪ ಕೃಷ್ಣ ಜೆ. ರಾವ್ ಮೇಲಿದೆ. ಈ ಸಂಬಂಧ ದಾಖಲಾಗಿದ್ದ ಪ್ರಕರಣದ ಕಾನೂನು ಹೋರಾಟದ ಭಾಗವಾಗಿ ಈಗ ಹೈಕೋರ್ಟ್ ಈ ಮಧ್ಯಂತರ ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.
ನ್ಯಾಯಾಲಯದ ಷರತ್ತುಗಳು:
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:
💥ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಅರ್ಜಿದಾರರು ಪ್ರತಿ ತಿಂಗಳು ₹75,000 ಪಾವತಿಸಬೇಕು.
💥ಆದೇಶ ಹೊರಬಿದ್ದ ಒಂದು ವಾರದ ಒಳಗಾಗಿ ಮೊದಲ ಕಂತಿನ ₹75 ಸಾವಿರ ಹಣವನ್ನು ಸಂತ್ರಸ್ತೆಗೆ ತಲುಪಿಸಬೇಕು.
ಈ ಹಣವನ್ನು ನಿಯಮಿತವಾಗಿ ಪಾವತಿಸುವ ಷರತ್ತಿನ ಮೇಲೆ ಮಾತ್ರ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ತಡೆಯಾಜ್ಞೆ ಅನ್ವಯವಾಗಲಿದೆ.





