ಮಣಿಪಾಲ: ಏಪ್ರಿಲ್ 24: ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲಿ ದುರ್ಘಟನೆ ಸಂಭವಿಸಿದ್ದು, ಮಾವಿನ ಕಾಯಿ ಕಟಾವು ನಡೆಸುತ್ತಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮರದ ಮೇಲಿಂದ ಹಾದುಹೋಗುತ್ತಿದ್ದ ವಿದ್ಯುತ್ ತಂತಿ ಅಜಾಗರೂಕತೆಯಿಂದ ಸ್ಪರ್ಶಗೊಂಡಿದೆ. ಮಾವಿನ ಕಾಯಿ ಕಟಾವು ಮಾಡಲು ಬಳಸಿದ ಕಬ್ಬಿಣದ ನಳಿಕೆ ತಂತಿಗೆ ತಗುಲಿದ ಪರಿಣಾಮ, ತಕ್ಷಣವೇ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮೃತರನ್ನು ಅಲೆವೂರು ಗ್ರಾಮದ ನಿವಾಸಿ, ಗ್ರಾಮ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ ದೇವಾಡಿಗ (55) ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ತೆರವುಗೊಳಿಸಲು ಸಹಕರಿಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸಹ ನೆರವಾದರು.





