ಉಡುಪಿ : ಡಿಜಿಟಲ್ ಮಾಧ್ಯಮದಲ್ಲಿ ಅಕ್ರಮದ ಕುರಿತು ವರದಿ ಪ್ರಸಾರ ಮಾಡಿದ ಹಿನ್ನೆಲೆ ಕುಪಿತಗೊಂಡ ಕೆಲವರು ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕುಂಬಾರಬೆಟ್ಟು ವಡ್ಡರ್ಸೆ ಗ್ರಾಮದ ನಿವಾಸಿ ಪ್ರಣುತ್ ಕುಮಾರ್ (29) ನ್ಯೂಸ್ ನೆಕ್ಸ್ಟ್ ಡಿಜಿಟಲ್ ಚಾನೆಲ್‌ನಲ್ಲಿ ಅಕ್ರಮ ಆಮೆಮಣ್ಣು ಸಾಗಾಟ ವಿಚಾರವಾಗಿ ವರದಿ ಮಾಡಿದ್ದು, ಈ ಕುರಿತು ಅಸಮಾಧಾನಗೊಂಡ ಆರೋಪಿ ಅಜಿತ್ ಕುಮಾರ್ ಶೆಟ್ಟಿ ಎಂಬಾತ, ಯಾಳಹಕ್ಲು ಚಂದ್ರಶೆಟ್ಟಿ ಹಾಗೂ ಅಪರಿಚಿತ ಮಹಿಳೆಯೊಂದಿಗೆ ಏಪ್ರಿಲ್ 15ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬಿಳಿ ಬಣ್ಣದ ಕ್ರೇಟಾ ಕಾರಿನಲ್ಲಿ ಬಂದು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ.
ಈ ವೇಳೆ ಮನೆಯ ಅಂಗಳದಲ್ಲಿ ಇದ್ದ ಪ್ರಣುತ್ ಅವರ ದೊಡ್ಡಮ್ಮ ಪ್ರೇಮಾ ಅವರನ್ನು ಉದ್ದೇಶಿಸಿ, ವರದಿ ಪ್ರಸಾರ ಮಾಡಿ ಏನು ಮಾಡುತ್ತಾನೆ, ತಕ್ಷಣ ಈ ಊರನ್ನು ಬಿಟ್ಟು ಹೋಗಬೇಕು, ಇಲ್ಲವಾದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಗಲಾಟೆ ಕೇಳಿ ಹೊರಬಂದ ಪ್ರಣುತ್ ಕುಮಾರ್ ಅವರಿಗೆ ಅಜಿತ್ ಕುಮಾರ್ ಶೆಟ್ಟಿ ಈಗಲೇ ವರದಿ ಡಿಲೀಟ್ ಮಾಡಬೇಕು, ಇಲ್ಲದಿದ್ದರೆ ಕೋಟಾದಲ್ಲಿರುವ ನಿಮ್ಮ ಸ್ಟುಡಿಯೋಗೆ ಬೆಂಕಿ ಹಚ್ಚಿ ನಿಮಗೆ ಹಾನಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು. ಇದೇ ವೇಳೆ ಚಂದ್ರಶೆಟ್ಟಿ ಮುಂದೆ ಮರಳುಗಾರಿಕೆ ಹಾಗೂ ಕೊಜೆ ಮಣ್ಣು ಕುರಿತು ವರದಿ ಮಾಡಿದರೆ ಕೈಕಾಲು ಮುರಿದು ಬಿಡುತ್ತೇವ” ಎಂದು ಜೀವ ಬೆದರಿಕೆ ಹಾಕಿದರೆಂದು ತಿಳಿದುಬಂದಿದೆ.
ಈ ಕುರಿತು ಪ್ರಣುತ್ ಕುಮಾರ್ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





