ಕಲಬುರಗಿ: ಇಂದು ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಅಫಜಲಪುರ ಮುಖ್ಯರಸ್ತೆ ಗೊಬ್ಬೂರ ಬಳಿ ಸಂಭವಿಸಿದೆ.
ಮೃತಪಟ್ಟವರು ಆಯೇಷಾ (70), ಅಜ್ಮೆರಾ (30) ಮತ್ತು ಅಜ್ಮೇರಾ ಮಗಳು ಜೈನಬ್ (2) ಮೃತ ದುರ್ದೈವಿಗಳು ಎಂದು ತಿಳಿಯಲಾಗಿದೆ.
ಮೃತ ಮೂವರು ಕಲಬುರಗಿ ನಗರದ ಮಿಲ್ಲತ್ ನಗರ ಬಡಾವಣೆ ನಿವಾಸಿಗಳು. ಇಂದು ಬೆಳಿಗ್ಗೆ ಕಾರಿನಲ್ಲಿ ಒಂದೇ ಕುಟುಂಬದ 8 ಜನ ಸೇರಿದಂತೆ 5 ಜನ ಮಕ್ಕಳು ಸಂಬಂಧಿಕರ ಮಗುವಿನ ಜವಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು.
ಅದೇ ವೇಳೆ ಗೊಬ್ಬೂರ ಗ್ರಾಮದ ಬಳಿ ಕಾರಿಗೆ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ರಸ್ತೆ ಬದಿಯ ತಡೆ ಕಂಬಗಳಿಗೆ ಢಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 6 ಕಂಬಗಳು ಹಾಗೂ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಅಲ್ಲದೇ ಸ್ಥಳದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ.
ದೇವಲ ಗಾನಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

