ಮಲ್ಪೆ: ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಥದೈಸ್ ಎಮ್ (45) ಎಂದು ಗುರುತಿಸಲಾಗಿದೆ. ಅವರು ತಮಿಳುನಾಡಿನ ಜರೀನ ಬಿನೇಶ ಅವರ ಮಾಲಿಕತ್ವದ IND-TN-15-MO-8375 ನಂಬರ್‌ನ ‘ಸೆಂಟ್ ಅಥೋನಿ’ ಮೀನುಗಾರಿಕಾ ಬೋಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಮಾರ್ಚ್ 1ರಂದು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆ ಮೀನುಗಾರಿಕೆ ಕಾರ್ಯ ಮುಗಿಸಿ ಬೋಟಿನ ಮೇಲ್ಭಾಗಕ್ಕೆ ಬರುತ್ತಿದ್ದಾಗ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಸಹ ಮೀನುಗಾರರು ತಕ್ಷಣವೇ ಸಮುದ್ರಕ್ಕೆ ಹಾರಿ ಶೋಧ ಕಾರ್ಯ ನಡೆಸಿ ಸುಮಾರು 20 ನಿಮಿಷಗಳ ನಂತರ ಅವರನ್ನು ಮೇಲಕ್ಕೆತ್ತಿದ್ದಾರೆ. ಆ ಸಮಯದಲ್ಲಿ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದರು.
ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಮಧ್ಯಾಹ್ನ 3:10ರ ವೇಳೆಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರಿಶೀಲಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



