Home Crime ವಿದೇಶಿ ಗಿಫ್ಟ್ ಕೋರಿಯರ್‌ ಹೆಸರಿನಲ್ಲಿ ಶಿರ್ವದ ಮಹಿಳೆಗೆ 13.99 ಲಕ್ಷ ರೂ. ವಂಚನೆ…!!

ವಿದೇಶಿ ಗಿಫ್ಟ್ ಕೋರಿಯರ್‌ ಹೆಸರಿನಲ್ಲಿ ಶಿರ್ವದ ಮಹಿಳೆಗೆ 13.99 ಲಕ್ಷ ರೂ. ವಂಚನೆ…!!

ಶಿರ್ವ : ವಿದೇಶದಿಂದ ಗಿಫ್ಟ್ ಕೋರಿಯರ್‌ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 13,99,700 ರೂ. ಹಣವನ್ನು ಕಸಿದುಕೊಂಡಿರುವ ಸೈಬರ್ ವಂಚನೆ ಪ್ರಕರಣ ಶಿರ್ವದಲ್ಲಿ ಬೆಳಕಿಗೆ ಬಂದಿದೆ.

ಪಿರ್ಯಾದಿದಾರರಾದ ವಿದ್ಯಾ ಅವರು ಕೆನರ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಸುಮಾರು ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ‘ಮಿಲರ್ ಗೇರ್ ಹಾರ್ಡ್’ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿತ್ತು. ಆತ ತಾನು ವಿದೇಶದಲ್ಲಿದ್ದು, ತನ್ನ ಹೆಸರಿನಲ್ಲಿ ಗಿಫ್ಟ್ ಕೋರಿಯರ್ ಕಳುಹಿಸಿರುವುದಾಗಿ ಫೆ. 22ರಂದು ತಿಳಿಸಿ ಅದರ ಛಾಯಾಚಿತ್ರವನ್ನೂ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ.

ಫೆ. 23ರಂದು ಬೆಳಿಗ್ಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ, ವಿದೇಶದಿಂದ ಬಂದಿರುವ ಕೋರಿಯರ್ ವಿಮಾನ ನಿಲ್ದಾಣದಿಂದ ಬಿಡುಗಡೆಯಾಗಲು 49,700 ರೂ. ಪಾವತಿಸಬೇಕೆಂದು ತಿಳಿಸಿದ್ದಾಳೆ.

ಅದರಂತೆ ಮಹಿಳೆ ಐಡಿಬಿಐ ಬ್ಯಾಂಕ್ ದೆಹಲಿ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಕೋರಿಯರ್‌ನಲ್ಲಿ 30,000 ಪೌಂಡ್ ವಿದೇಶಿ ಕರೆನ್ಸಿ ಇದೆ, ಇದು ಕಾನೂನು ಬಾಹಿರವಾಗಿರುವುದರಿಂದ ತುರ್ತಾಗಿ ಮತ್ತಷ್ಟು ಹಣ ಪಾವತಿಸಬೇಕೆಂದು ಹೇಳಿ 1,89,000 ರೂ. ಪಡೆದುಕೊಂಡಿದ್ದಾರೆ.

ಇದಲ್ಲದೆ ಮನಿ ಎಕ್ಸ್‌ಚೇಂಜ್‌, ಡಾಕ್ಯುಮೆಂಟೇಶನ್ ಸೇರಿದಂತೆ ವಿವಿಧ ನೆಪಗಳಲ್ಲಿ ಹಲವು ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಲು ಒತ್ತಾಯಿಸಿದ್ದು, ಫೆ. 23-27ರವರೆಗೆ ಒಟ್ಟು 13,99,700 ರೂ. ಹಣವನ್ನು ವಂಚಕರು ಕಸಿದುಕೊಂಡಿದ್ದಾರೆ.

ಕೋರಿಯರ್‌ನಲ್ಲಿ 30,000 ಪೌಂಡ್ ಇದ್ದು, ಅದು ಭಾರತೀಯ ಕರೆನ್ಸಿಯಲ್ಲಿ ಸುಮಾರು 37 ಲಕ್ಷ ರೂ. ಆಗುತ್ತದೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕೋರಿಯರ್ ಬಂದಿಲ್ಲವೆಂಬುದು ತಿಳಿದು ಬಂದ ನಂತರ ವಿದ್ಯಾ ಅವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.