ಕುಂದಾಪುರ: ಪುರಸಭೆ ವ್ಯಾಪ್ತಿಯ ಹೃದಯ ಭಾಗದ ಕುಂದೇಶ್ವರ ದೇವಸ್ಥಾನದ ಮುಖ ಮಂಟಪದ ಎದುರುಗಡೆ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿದ ಸವಾರರಿಗೆ ಹಾಗೂ ಸಂಚಾರ ಉಲ್ಲಂಘನೆ ಮಾಡಿದವರಿಗೆ ಲೇಡಿ ಸಿಂಗಂ ಖ್ಯಾತಿಯ PSI ಸುಧಾ ಪ್ರಭು ಮತ್ತು ಸಿಬ್ಬಂದಿಗಳು ದಂಡ ಹಾಕಿದರು
ಕುಂದಾಪುರ ಪುರಸಭೆ ವ್ಯಾಪ್ತಿಯ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದ ವಾಹನ ಸವಾರರಿಗೆ ಹಾಗೂ ಸಂಚಾರ ಉಲ್ಲಂಘನೆ ಮಾಡಿದವರಿಗೆ ಭಾನುವಾರ ಕುಂದಾಪುರ ಸಂಚಾರ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು.
ಕಳೆದ ಹಲವು ದಿನಗಳಿಂದ ಪುರಸಭೆ ವ್ಯಾಪ್ತಿಯ ಪಟ್ಟಣ ಭಾಗದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ಹಾಕಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡದಂತೆ ಸವಾರರಿಗೆ ಎಚ್ಚರಿಕೆ ನೀಡಿದರು.
ಕುಂದಾಪುರ ಖಾಸಗಿ ಬಸ್ ನಿಲ್ದಾಣದಿಂದ ಕುಂದಾಪುರ ಸಾರ್ವಜನಿಕ ಆಸ್ಪತ್ರೆ, ಪಾರಿಜಾತ ಕುಂದೇಶ್ವರ ದೇವಸ್ಥಾನದ ಮುಖ ಮಂಟಪದ ಎದುರುಗಡೆ ಹಾಗೂ ಶಾಸ್ತ್ರಿ ಸರ್ಕಲ್ ಸೇರಿದಂತೆ ಹಲವೆಡೆ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿರುವುದರಿಂದ ಬೇರೆ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಪಡುವಂತಾಗಿತ್ತು.
ಕುಂದಾಪುರ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಸುಧಾ ಪ್ರಭು ಮತ್ತು ಸಿಬ್ಬಂದಿಗಳು ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಟ್ಟಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದ ಸವಾರರಿಗೆ ಸಂಚಾರ ನಿಯಮ ಪಾಲನೆ ಮತ್ತು ಜಾಗೃತಿ ಮೂಡಿಸಿ ದಂಡ ವಿಧಿಸಿ ವಾಹನ ತೆರವುಗೊಳಿಸಿದರು.
ಹೀಗಾಗಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ



