ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುಟುಂಬಸ್ಥರ ವಿರುದ್ಧ ಭೂಹಗರಣ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನವಾಗಿದೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ನೀಡಿದ ದೂರಿನ ಅನ್ವಯ ಬೆಂಗಳೂರು ಸೈಬರ್ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ್ದಾರೆ.
ನಟೇಶ್ ವಿರುದ್ದ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದರು. ಈ ಹಿನ್ನೆಲೆ ಮಾಜಿ ಮುಡಾ ಆಯುಕ್ತ ಸ್ನೇಹಮಯಿ ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಲಂಚದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನವಾಗಿದೆ. ಸ್ನೇಹಿಮಯಿ ಕೃಷ್ಣ ವಿರುದ್ಧ ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ದೂರು ನೀಡಿದ್ದರು. ಮುಂಬಡ್ತಿ ಪಡೆಯಲು ಹಣ ನೀಡಿದ್ದರು ಎಂದು ಮೈಸೂರಿನಲ್ಲಿ ನಟೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ನಟೇಶ್ ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದರು. ನಟೇಶ್ ನೀಡಿದ ದೂರಿನನ್ವಯ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ್ದಾರೆ.
ಸ್ನೇಹಮಯಿ ಕೃಷ್ಣ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೂರಿನ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ವಾರೆಂಟ್ ಪಡೆದಿರುವ ಸಿಸಿಬಿ ಪೊಲೀಸರು ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಎರಡು ಮನೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಅವರು ತಮ್ಮನ್ನ ಸಂಪರ್ಕಿಸುವ ಪ್ರಯತ್ನ ಮಾಡಿದ್ದು, ನನಗೆ ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ ಇದೇ ವಿಚಾರಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ಕೂಡ ಬಿಡುಗಡೆ ಮಾಡಿದ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ನಟೇಶ್ ಗೆ ಮುಂಬಡ್ತಿ ನೀಡುವ ವಿಚಾರ 3 ದಿನ ಮುಂಚೆಯೇ ಗೊತ್ತಿತ್ತು, ಕೋಟ್ಯಂತರ ಹಣ ಕೊಟ್ಟು ನಟೇಶ್ ಮುಂಬಡ್ತಿ ಪಡೆದಿದ್ದಾರೆ. ಮುಂಬಡ್ತಿಗಾಗಿ ಶಾಲಿನಿ ರಜನೀಶ್ ಅವರಿಗೆ ಹಣ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಿಎಸ್ ಶಾಲಿನಿ ರಜನೀಶ್ ಪತ್ರದ ಮೂಲಕ ಉತ್ತರ ನೀಡಿದ್ದಾರೆ.



