ಉಡುಪಿ : ಕೆಲವು ಪ್ರಕರಣಗಳಲ್ಲಿ ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ ಯಾರದು ಜೀವ ಹಾನಿಯಾಗಬಹುದು ಎನ್ನುವುದಕ್ಕೆ ಪೆರ್ಡೂರಿನ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣವೇ ಸಾಕ್ಷಿಯಾಗಿದೆ.
ಉಡುಪಿಯಂತಹ ಶಾಂತಿಯುತ ಜಿಲ್ಲೆಯಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬರುತ್ತಿರುವುದು ಆತಂಕಕಾರಿ. ಪ್ರೀತಿಸಿದೆ ಯುವತಿಯ ಮೇಲೆ ಅತ್ಯಾಚಾರದ ಆರೋಪವಿದ್ದ ಪ್ರದೀಪ್ ಪೂಜಾರಿ ಮೇಲೆ ನಡೆದ ನಡೆಸಲಾಗಿದೆ ಎನ್ನಲಾದ ಹಲ್ಲೆ ಪ್ರಕರಣದ ಬಗ್ಗೆ ಪ್ರಕರಣ ದಾಖಲಿಸದ ಹಿರಿಯಡ್ಕ ಪೊಲೀಸ ಠಾಣಾಧಿಕಾರಿಗಳ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ನ್ಯಾಯವಾದಿಗಳಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ಆಗ್ರಹಿಸಿದ್ದಾರೆ.
ಪ್ರದೀಪ್ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಹಾಗೂ ಅವರನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪಗಳ ಬಗ್ಗೆ ಪೊಲೀಸ್ ಇಲಾಖೆ ಈವರೆಗೆ ಕೈಗೊಂಡ ಕ್ರಮಗಳೇನು?
ಚಿತ್ರ :ಪ್ರದೀಪ್ ಪೂಜಾರಿ ದೇಹದ ಮೇಲಿರುವ ಹಲ್ಲೆ ಗಾಯಗಳು
ಯಾವ ವಾಹನದಲ್ಲಿ ಕರೆದೊಯ್ಯಲಾಗಿದೆ, ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ, ಹಲ್ಲೆ ನಡೆದಿದೆಯೇ ಎಂಬುದನ್ನು ಸಿಸಿಟಿವಿ ದೃಶ್ಯಾವಳಿ, ಸಾಕ್ಷಿಗಳ ಹೇಳಿಕೆ ಹಾಗೂ ವೈದ್ಯಕೀಯ ವರದಿಗಳ ಆಧಾರದಲ್ಲಿ ಸಮಗ್ರವಾಗಿ ತನಿಖೆ ನಡೆಸಬೇಕು.
ಇಷ್ಟೆಲ್ಲಾ ಗಂಭೀರ ಆರೋಪಗಳಿದ್ದರೂ ಸಂಬಂಧಪಟ್ಟ ಪ್ರಕರಣ ದಾಖಲಾಗಿದೆಯೇ? ದಾಖಲಾಗದಿದ್ದರೆ ಅದಕ್ಕೆ ಕಾರಣವೇನು? ದೂರು ಸ್ವೀಕರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲವೇ?
ಈ ವಿಚಾರವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಇಲಾಖೆಯ ಪಾತ್ರವೂ ಸೇರಿದಂತೆ ಸಂಪೂರ್ಣ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು.
ಕಾನೂನು ರಕ್ಷಿಸಬೇಕಾದವರೇ ಕಾನೂನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಬಂದಾಗ ಅದನ್ನು ನಿರ್ಲಕ್ಷಿಸುವುದು ನ್ಯಾಯವಲ್ಲ. ಅಧಿಕಾರ, ಪ್ರಭಾವ ಏನೇ ಇರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ಸತ್ಯ ಹೊರಬರಲಿ, ತಪ್ಪಿತಸ್ಥರಿಗೆ ಕಾನೂನುಬದ್ಧ ಶಿಕ್ಷೆಯಾಗಲಿ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಕೆಲವು ನೇರ ಪ್ರಶ್ನೆಗಳು:
- ಪ್ರದೀಪ್ ಪೂಜಾರಿ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪದ ಬಗ್ಗೆ ಪೊಲೀಸರು ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಿದ್ದಾರೆಯೇ?
- ಅವರನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ಯಲಾಗಿದೆ ಎಂಬ ಆರೋಪದ ಬಗ್ಗೆ ಪ್ರಕರಣ ದಾಖಲಿಸಲಾಗಿದೆಯೇ?
- ಅವರನ್ನು ಯಾವ ವಾಹನದಲ್ಲಿ, ಯಾರು ಕರೆದೊಯ್ದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆಯೇ?
- ಘಟನೆಯ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆಯೇ?
- ಗಾಯಗಳಿದ್ದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ಪಡೆಯಲಾಗಿದೆಯೇ?
- ಈ ಪ್ರಕರಣದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆಯೇ?
- ದೂರು ನೀಡಿದ್ದರೂ ಪ್ರಕರಣ ದಾಖಲಾಗದಿದ್ದರೆ ಅದಕ್ಕೆ ಕಾರಣವೇನು?
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ, ಈ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಸ್ಪಷ್ಟ ಉತ್ತರ ನೀಡುವ ಜವಾಬ್ದಾರಿ ನಿಮ್ಮ ಇಲಾಖೆಯ ಮೇಲಿದೆ.
ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ದೂರುದಾರನ ಪ್ರಭಾವವಲ್ಲ, ಘಟನೆಗೆ ಲಭ್ಯವಿರುವ ಸಾಕ್ಷ್ಯಗಳೇ ತನಿಖೆಯ ಆಧಾರವಾಗಬೇಕು. ಸತ್ಯವನ್ನು ಬಹಿರಂಗಪಡಿಸಿ, ತಪ್ಪಿತಸ್ಥರು ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು , ನ್ಯಾಯವಾದಿಗಳು, ಹಾಗೂ ಪ್ರಸ್ತುತ ಕಾಪು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾಗಳ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಮೂಡುಬೆಳ್ಳೆ ಆಗ್ರಹಿಸಿದ್ದಾರೆ.



