ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡು ಪ್ರಕಟಗೊಂಡ ಅಂತಿಮ ಪಟ್ಟಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,14,143 ಮತದಾರರಿದ್ದಾರೆ. ಎಸ್ಐಆರ್ಗೂ ಮುನ್ನ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ ಜಿಲ್ಲೆಯಲ್ಲಿ 49,733 ಮತದಾರರ ಇಳಿಕೆಯಾಗಿದೆ. ರಾಜ್ಯದ ಜಿಲ್ಲೆಗಳ ಪೈಕಿ ಉಡುಪಿಯಲ್ಲಿ ಅತಿ ಕಡಿಮೆ ಪ್ರಮಾಣದ ಇಳಿಕೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಪ್ರಕ್ರಿಯೆಯ ವಿವರಗಳನ್ನು ನೀಡಿದ ಅವರು, ಜೂನ್ 16ರಂದು ಪರಿಷ್ಕರಣೆ ಆರಂಭವಾಗುವ ಮೊದಲು ಜಿಲ್ಲೆಯಲ್ಲಿ 10,63,876 ಮತದಾರರಿದ್ದರು. ಆಗಸ್ಟ್ 24ರಂದು ಪ್ರಕಟಗೊಂಡ ಕರಡು ಪಟ್ಟಿಯಲ್ಲಿ 10,00,545 ಮತದಾರರ ಹೆಸರುಗಳಿದ್ದವು. ಇದೀಗ ಪ್ರಕಟಗೊಂಡ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 10,14,143ಕ್ಕೆ ತಲುಪಿದೆ ಎಂದು ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ ಮತದಾರರ ಇಳಿಕೆ ಪ್ರಮಾಣ ಶೇ.4.67ರಷ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.6.95 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.7.35ರಷ್ಟು ಇಳಿಕೆ ದಾಖಲಾಗಿದ್ದು, ಈ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ಕನಿಷ್ಠ ಇಳಿಕೆ ಕಂಡ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಎಸ್ಐಆರ್ ಗಣತಿ ಹಂತದಲ್ಲಿ ಜಿಲ್ಲೆಯಲ್ಲಿ 63,331 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇವರಲ್ಲಿ 4,145 ಮಂದಿ ಲಭ್ಯವಿಲ್ಲದವರು, 29,361 ಮಂದಿ ಸ್ಥಳಾಂತರಗೊಂಡವರು, 21,262 ಮಂದಿ ಮೃತಪಟ್ಟವರು, 8,374 ಮಂದಿ ನಕಲಿ ಅಥವಾ ದ್ವಿರುಕ್ತಿ ನಮೂದುಗಳಿಗೆ ಸೇರಿದವರು ಹಾಗೂ 189 ಮಂದಿ ಇತರ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದವರು.
ತಾಲೂಕುವಾರು ಅಂಕಿಅಂಶಗಳ ಪ್ರಕಾರ ಬೈಂದೂರಿನಲ್ಲಿ 14,280, ಕುಂದಾಪುರದಲ್ಲಿ 11,634, ಉಡುಪಿಯಲ್ಲಿ 17,726, ಕಾಪುವಿನಲ್ಲಿ 10,034 ಹಾಗೂ ಕಾರ್ಕಳದಲ್ಲಿ 9,657 ಹೆಸರುಗಳನ್ನು ಗಣತಿ ಹಂತದಲ್ಲಿ ತೆಗೆದುಹಾಕಲಾಗಿದೆ.
ಕರಡು ಪಟ್ಟಿ ಪ್ರಕಟವಾದ ಬಳಿಕವೂ ವಿವಿಧ ಕಾರಣಗಳಿಂದ 3,736 ಹೆಸರುಗಳನ್ನು ತೆರವುಗೊಳಿಸಲಾಗಿದೆ. ಈ ಪೈಕಿ 35 ಮಂದಿ ಮೃತಪಟ್ಟವರು, 2,620 ಮಂದಿ ಸ್ಥಳಾಂತರಗೊಂಡವರು, ನಾಲ್ಕು ನಕಲಿ ಅಥವಾ ದ್ವಿರುಕ್ತಿ ನಮೂದುಗಳು ಹಾಗೂ 1,077 ಮಂದಿ ಇತರ ಕಾರಣಗಳಿಗೆ ಸೇರಿದವರು. ತಾಲೂಕುವಾರು ಈ ಸಂಖ್ಯೆ ಬೈಂದೂರಿನಲ್ಲಿ 712, ಕುಂದಾಪುರದಲ್ಲಿ 610, ಉಡುಪಿಯಲ್ಲಿ 925, ಕಾಪುವಿನಲ್ಲಿ 816 ಹಾಗೂ ಕಾರ್ಕಳದಲ್ಲಿ 673 ಆಗಿದೆ.
ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಜಿಲ್ಲೆಯಲ್ಲಿ 17,334 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಇವರಲ್ಲಿ 8,540 ಪುರುಷರು ಹಾಗೂ 8,794 ಮಹಿಳೆಯರಿದ್ದಾರೆ. ಈ ಪೈಕಿ ಫಾರ್ಮ್ 6ರಡಿ 14,351 ಹಾಗೂ ಫಾರ್ಮ್ 6ಎರಡಿ 265 ಅರ್ಜಿಗಳನ್ನು ಅಂಗೀಕರಿಸಲಾಗಿದೆ. ಫಾರ್ಮ್ 8ರಡಿ ಸ್ವೀಕರಿಸಿದ ಅರ್ಜಿಗಳಲ್ಲಿ 2,718 ಮತದಾರರ ಸೇರ್ಪಡೆಗೆ ಕಾರಣವಾಗಿವೆ.
ಯುವ ಮತದಾರರ ನೋಂದಣಿಯಲ್ಲಿಯೂ ಹೆಚ್ಚಳವಾಗಿದೆ. ಕರಡು ಪಟ್ಟಿಯಲ್ಲಿ 5,914 ಯುವ ಮತದಾರರಿದ್ದರೆ, ಎಸ್ಐಆರ್ ಪ್ರಕ್ರಿಯೆ ವೇಳೆ ಹೊಸದಾಗಿ 5,347 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಅಂತಿಮ ಪಟ್ಟಿಯಲ್ಲಿ ಯುವ ಮತದಾರರ ಒಟ್ಟು ಸಂಖ್ಯೆ 11,261 ಆಗಿದೆ.
ಕರಡು ಪಟ್ಟಿ ಪ್ರಕಟವಾದ ಬಳಿಕ ಜಿಲ್ಲೆಯಲ್ಲಿ ವಿವಿಧ ಉದ್ದೇಶಗಳಿಗಾಗಿ ಒಟ್ಟು 59,080 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ 55,887 ಅರ್ಜಿಗಳನ್ನು ಅಂಗೀಕರಿಸಲಾಗಿದ್ದು, 3,193 ಅರ್ಜಿಗಳು ತಿರಸ್ಕೃತಗೊಂಡಿವೆ.
ಫಾರ್ಮ್ 6ರಡಿ ಹೊಸ ಮತದಾರರ ಸೇರ್ಪಡೆಗಾಗಿ 14,712 ಅರ್ಜಿಗಳು ಬಂದಿದ್ದು, 14,351 ಅಂಗೀಕಾರಗೊಂಡಿವೆ ಮತ್ತು 361 ತಿರಸ್ಕೃತಗೊಂಡಿವೆ. ಅನಿವಾಸಿ ಭಾರತೀಯ ಮತದಾರರ ನೋಂದಣಿಗೆ ಸಂಬಂಧಿಸಿದ ಫಾರ್ಮ್ 6ಎರಡಿ 349 ಅರ್ಜಿಗಳು ಬಂದಿದ್ದು, 265 ಅಂಗೀಕಾರಗೊಂಡು 84 ತಿರಸ್ಕೃತಗೊಂಡಿವೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಸಂಬಂಧಿಸಿದ ಫಾರ್ಮ್ 7ರಡಿ 5,043 ಅರ್ಜಿಗಳು ಬಂದಿದ್ದು, 3,736 ಅಂಗೀಕಾರಗೊಂಡು 1,307 ತಿರಸ್ಕೃತಗೊಂಡಿವೆ. ವರ್ಗಾವಣೆ ಮತ್ತು ಇತರ ತಿದ್ದುಪಡಿಗಳಿಗೆ ಸಂಬಂಧಿಸಿದ ಫಾರ್ಮ್ 8ರಡಿ 38,976 ಅರ್ಜಿಗಳು ಸ್ವೀಕೃತವಾಗಿದ್ದು, 37,535 ಅಂಗೀಕಾರಗೊಂಡು 1,441 ತಿರಸ್ಕೃತಗೊಂಡಿವೆ.
ಜಿಲ್ಲೆಯಲ್ಲಿ 21 ಮಂದಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಇವರು ಗಣತಿ ನಮೂನೆಗಳನ್ನು ಸ್ವೀಕರಿಸಲು ಅಥವಾ ಯಾವುದೇ ದಾಖಲೆಗಳನ್ನು ನೀಡಲು ಮತ್ತು ಪಡೆಯಲು ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದು ಸ್ವರೂಪ ಟಿ.ಕೆ. ತಿಳಿಸಿದರು. ಇವರಲ್ಲಿ ಒಂಬತ್ತು ಮಂದಿ ಉಡುಪಿ ಹಾಗೂ 12 ಮಂದಿ ಕಾಪು ತಾಲೂಕಿನವರು.
ಕರಡು ಪಟ್ಟಿಯ ಬಳಿಕ ಇತರ ಕಾರಣಗಳಡಿ ಹೆಸರು ತೆಗೆದುಹಾಕಲಾದ 1,077 ಪ್ರಕರಣಗಳ ಪೈಕಿ 97 ಮಂದಿ ಲಭ್ಯವಿರಲಿಲ್ಲ, 213 ಮಂದಿ ಮೃತಪಟ್ಟಿದ್ದರು, 286 ನಮೂದುಗಳು ನಕಲಿ ಅಥವಾ ದ್ವಿರುಕ್ತಿಯಾಗಿದ್ದವು, 390 ಮಂದಿ ಸ್ಥಳಾಂತರಗೊಂಡಿದ್ದರು ಹಾಗೂ 23 ಮಂದಿ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಎಂದು ಅವರು ವಿವರಿಸಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 47 ಮಂದಿ ಭಾರತೀಯ ನಾಗರಿಕರಲ್ಲದವರು ಅಥವಾ ವಿದೇಶಿ ಪೌರತ್ವ ಹೊಂದಿರುವವರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಇವರಲ್ಲಿ ನೇಪಾಳದ 37 ಮಂದಿ, ಬ್ರಿಟನ್ನ ಮೂವರು, ಅಮೆರಿಕದ ನಾಲ್ವರು ಹಾಗೂ ಕೆನಡಾ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬರು ಸೇರಿದ್ದಾರೆ.
ಬ್ರಹ್ಮಾವರ ತಾಲೂಕಿನಲ್ಲಿ ಇಬ್ಬರು ನೇಪಾಳದ ನಾಗರಿಕರು ಪತ್ತೆಯಾಗಿದ್ದಾರೆ. ಉಡುಪಿಯಲ್ಲಿ 26 ಮಂದಿ ಪತ್ತೆಯಾಗಿದ್ದು, ಇವರಲ್ಲಿ ನೇಪಾಳದ 18 ಮಂದಿ, ಬ್ರಿಟನ್ನ ಮೂವರು, ಅಮೆರಿಕದ ಮೂವರು, ಕೆನಡಾ ಮತ್ತು ಫ್ರಾನ್ಸ್ನ ತಲಾ ಒಬ್ಬರು ಇದ್ದಾರೆ. ಕಾಪು ತಾಲೂಕಿನಲ್ಲಿ ನೇಪಾಳದ 17 ಮಂದಿ ಹಾಗೂ ಕಾರ್ಕಳದಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬರು ಪತ್ತೆಯಾಗಿದ್ದಾರೆ.
ನೇಪಾಳದ ನಾಗರಿಕರನ್ನು ಹೊರತುಪಡಿಸಿ ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯರಾಗಿದ್ದು, ಆಯಾ ದೇಶಗಳ ಪೌರತ್ವ ಪಡೆದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರು ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸ್ವರೂಪ ಟಿ.ಕೆ. ಮನವಿ ಮಾಡಿದರು. 2026ರ ಅಕ್ಟೋಬರ್ 1ರ ಅರ್ಹತಾ ದಿನಾಂಕದಂತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ಅರ್ಹ ನಾಗರಿಕರು ಅಥವಾ ವಿವರಗಳಲ್ಲಿ ತಿದ್ದುಪಡಿ ಮಾಡಬೇಕಿರುವವರು ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಅಂತಿಮ ಮತದಾರರ ವಿವರ
ವಿಧಾನಸಭಾ ಕ್ಷೇತ್ರ
ಪುರುಷರು
ಮಹಿಳೆಯರು
ತೃತೀಯ ಲಿಂಗ
ಒಟ್ಟು
ಬೈಂದೂರು
1,12,987
1,17,319
3
2,30,309
ಕುಂದಾಪುರ
97,975
1,05,126
2
2,03,103
ಉಡುಪಿ
1,00,112
1,07,483
3
2,07,598
ಕಾಪು
90,588
97,361
3
1,87,952
ಕಾರ್ಕಳ
89,447
95,734
0
1,85,181
ಒಟ್ಟು
4,91,109
5,23,023
11
10,14,143



