ಮೂಡುಬೆಳ್ಳೆ: ಡಿಸಿ ಮನ್ನಾ ಜಮೀನು ಬಂಡೆ, ಹೊಳೆ, ರಸ್ತೆ, ಸಾರ್ವಜನಿಕ ಉದ್ದೇಶ ಇತ್ಯಾದಿಗಳಲ್ಲಿ ಕಳೆದುಹೋಗಿದ್ದು, ದಲಿತರಿಗೆ ಈ ಜಮೀನಿಗೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಮೀಸಲಿರಿಸುವ ಬಗ್ಗೆ ಹಾಗೂ ಭೂ ಅನುದಾನ ನಿಯಮಾವಳಿ ೧೯೬೯ರಂತೆ ಪ್ರತಿ ಗ್ರಾಮದಲ್ಲಿ ಶೇ. ೫೦ ಸರಿಕಾರಿ ಜಮೀನನ್ನು ದಲಿತರಿಗೆ ಮೀಸಲಿರಿಸುವಂತೆ ಕಾಪು ತಾಲ್ಲೂಕು ತಹಶೀಲ್ದಾರರಿಗೆ ಹಲವು ಹಕ್ಕೊತ್ತಾಯಗಳನ್ನು ಸಲ್ಲಿಸಿದ್ದರೂ ಅವರು ಈ ವರಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಅವರು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಸಂಜೀವ ಬಳ್ಕೂರು ಎಚ್ಚರಿಕೆ ನೀಡಿದರು.
ಅವರು ಮೂಡುಬೆಳ್ಳೆಯಲ್ಲಿ ಡಿಎಚ್ಎಸ್ ಕಾರ್ಯಾಲಯ ‘ಪ್ರಬುದ್ಧ’ದಲ್ಲಿ ಅ. ೨೬ರಂದು ಜರಗಿದ ಪತ್ರಿಕಾ ಪ್ರಕಟನೆಯಲ್ಲಿ ಈ ಮಾಹಿತಿ ನೀಡಿದರು.
ದಲಿತರ ವಿವಿಧ ಬೇಡಿಕೆಗಳನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಒಳಪಡಿಸುವಂತೆ ಹಕ್ಕೊತ್ತಾಯ ಮಾಡುವ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನು ಸಂಘಟನೆಯಿಂದ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ರಾಜ್ಯ ಸರಕಾರ ೨೦೨೨-೨೩ನೇ ಸಾಲಿನಿಂದ ವಸತಿ ಮನೆಗಳನ್ನು ಮಂಜೂರು ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾರಾಯಿ ಅಂಗಡಿಗೆ ಜಾಗ!
ಕಟ್ಟಿಂಗೇರಿ ಗ್ರಾಮದ ಸನಂ ೬/೧ಸಿಯಲ್ಲಿ ಹಲವು ದಶಕಗಳಿಂದ ದಲಿತ ಕುಟುಂಬಗಳು ವಾಸವಿದ್ದು ಅವರಿಗೆ ಈ ಸರಕಾರಿ ಜಮೀನು ಬಂಡೆ ಎಂಬ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಆದರೆ ಈ ಜಮೀನನ್ನು ಸಾರಾಯಿ ಅಂಗಡಿಗೆ ಹಿಂದೆ ಮೀಸಲಿರಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಹಿಂಬರಹ ನೀಡಿದ್ದಾರೆ. ಸಾರಾಯಿ ಅಂಗಡಿಗೆ ನೀಡಬಹುದಾದರೆ ದಲಿತರ ಮನೆ ನಿವೇಶನಕ್ಕೆ ಸರಕಾರಿ ಜಾಗ ನೀಡಲು ಸಾಧ್ಯವಿಲ್ಲವೇ? ತಹಶೀಲ್ದಾರ್ ಕಾಪು ಅವರು ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗೆ ಯಥಾಸ್ಥಿತಿ ವರದಿ ನೀಡಬೇಕು ಎಂದು ದಸಂಸ ಅಂಬೇಡ್ಕರ್ ವಾದ ಕಾಪು ತಾಲ್ಲೂಕು ಸಂಘಟನಾ ಸಂಚಾಲಕ ಕೃಷ್ಣ ಮೂಡುಬೆಳ್ಳೆ ಆಗ್ರಹಿಸಿದರು.
ಬೈಂದೂರು ನಾಡಾ ಗ್ರಾಮದ ದಲಿತರಿಗೆ ಹಲವು ದಶಕಗಳು ಕಳೆದರೂ ಹಕ್ಕುಪತ್ರ ನೀಡಲಾಗಿಲ್ಲ. ಅಂಪಾರು ಗ್ರಾಮದಲ್ಲೂ ಈ ಸಮಸ್ಯೆ ಇದೆ ಎಂದು ಡಿಎಚ್ಎಸ್ ಕೋಶಾಧಿಕಾರಿ ನಾಗರತ್ನಾ ಆರ್. ನಾಡಾ ಹೇಳಿದರು.
ಶಾನಾಡಿಯಲ್ಲಿ ಕೊರಗ ಸಮುದಾಯದ ಮಹಿಳೆ ಹಾಗೂ ವಿಕಲಚೇತನ ಮಗುವಿನ ದುರಂತ ಅಂತ್ಯವು ಅಳಿವಿನಂಚಿನಲ್ಲಿರುವ ಸಮುದಾಯಕ್ಕೆ ಸರಕಾರ ತಲುಪದ ಉದಾಹರಣೆಯಾಗಿದೆ ಎಂದು ಡಿಎಚ್ಎಸ್ ಕಾರ್ಯದರ್ಶಿ ರವಿ ವಿಎಂ ಹೇಳಿದರು.
ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ, ಗೌರವಾಧ್ಯಕ್ಷ ಸುಧಾಕರ ಪಾಣಾರ ಉಪಸ್ಥಿತರಿದ್ದರು.


