ಸುರತ್ಕಲ್: ಎಂಆರ್ಪಿಎಲ್ ಘಟಕದಲ್ಲಿ ಸೆ. 30ರಂದು ಸಂಭವಿಸಿದ್ದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ರಾಜೇಶ್ ಡಿಸಿಲ್ವ ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಶೇ. 35 ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಇವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮೃತ ರಾಜೇಶ್ ಡಿಸಿಲ್ವ ಅವರು ಸುರತ್ಕಲ್ ಸಮೀಪದ ಇಡ್ಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನಿನ್ನೆ ಸಂಜೆಯ ವೇಳೆಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ಸ್ಫೋಟ ದುರ್ಘಟನೆಯಲ್ಲಿ ಈ ಹಿಂದೆ ಮೃತಪಟ್ಟಿದ್ದ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಸಂಸ್ಥೆ ಹಾಗೂ ಆಡಳಿತ ವತಿಯಿಂದ ₹1 ಕೋಟಿಗೂ ಅಧಿಕ ಪರಿಹಾರ ಘೋಷಿಸಲಾಗಿತ್ತು. ಅಲ್ಲದೆ ಘಟನೆಯಲ್ಲಿ ಗಾಯಗೊಂಡ ಎಲ್ಲ ಗಾಯಾಳುಗಳಿಗೂ ಸೂಕ್ತ ವಿಮಾ ಸೌಲಭ್ಯ ಒದಗಿಸಲಾಗಿದೆ.



