ಕಾಪು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ಕಾಪು ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 4ರಂದು ಸಂಜೆ ಕಾಪು ಪೊಲೀಸ್ ಠಾಣೆಯ ಪಿ.ಎಸ್.ಐ. ಶುಭಕರ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡಂಬು ಪಾಪನಾಶಿನಿ ಹೊಳೆಬದಿಯ ಹಾಡಿ ಪ್ರದೇಶದಲ್ಲಿ ದಾಳಿ ನಡೆಸಲಾಯಿತು.
ಈ ವೇಳೆ ಕೆಲವರು ಗುಂಪಾಗಿ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿರುವುದು ಕಂಡುಬಂದಿದೆ. ಪೊಲೀಸರು ದಾಳಿ ನಡೆಸಿದಾಗ ಅಲ್ಲಿದ್ದವರು ಓಡಿಹೋಗಲು ಯತ್ನಿಸಿದ್ದು, ಅವರಲ್ಲಿ ನಾಲ್ವರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಶಕ್ಕೆ ಪಡೆದವರನ್ನು ಪರಶುರಾಮ ಎಣ್ಣಿ, ಶರಣಪ್ಪ ತಳವಾರ, ಮಂಜುನಾಥ ಉಳ್ಳಾಗಡ್ಡಿ ಮತ್ತು ಶರಣಪ್ಪ ಮುಶಿಗೇರಿ ಎಂದು ಗುರುತಿಸಲಾಗಿದೆ.
ಸ್ಥಳದಲ್ಲಿ ಜುಗಾರಿ ಆಟಕ್ಕೆ ಬಳಸುತ್ತಿದ್ದ 52 ಇಸ್ಪೀಟ್ ಎಲೆಗಳು, ₹1,360 ನಗದು ಹಣ ಹಾಗೂ ಒಂದು ಪ್ಲಾಸ್ಟಿಕ್ ತರ್ಪಾಲ್ ಅನ್ನು ಪೊಲೀಸರು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



