Home Crime ಎಸ್ಐಆರ್ ನೆಪದಲ್ಲಿ ಮನೆಯೊಳಗೆ ಬಂದು ವೃದ್ಧೆಯ ಚಿನ್ನದ ಸರ ದರೋಡೆ…!!

ಎಸ್ಐಆರ್ ನೆಪದಲ್ಲಿ ಮನೆಯೊಳಗೆ ಬಂದು ವೃದ್ಧೆಯ ಚಿನ್ನದ ಸರ ದರೋಡೆ…!!

ಉಡುಪಿ: ನಗರದ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಎಸ್ ಐ ಆರ್ ಮಾಹಿತಿ ಪಡೆಯುವ ನೆಪದಲ್ಲಿ ಮನೆಯೊಳಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಂಗಿಯಾಗಿದ್ದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ದೋಚಿ ಪರಾರಿಯಾಗಿದ್ದಾರೆ.

ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ಶಾಂತ ಕಾರಂತ್ (74) ಸಂತ್ರಸ್ತೆ. ಅ. 7 ರಂದು ಸಂಜೆ ಮನೆ ಬಳಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ನಾವು ಎಸ್ ಐ ಆರ್ ಕುರಿತು ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿ ತಿಳಿಸಿದ್ದಾರೆ.

ಇದನ್ನು ನಂಬಿದ ಶಾಂತ ಕಾರಂತ್ ಅವರು ಸಹಿ ಹಾಕಲು ಪೆನ್ನು ತರಲು ಮನೆಯ ಒಳಗಡೆ ಹೋಗಿದ್ದಾರೆ. ಈ ವೇಳೆ ಆಕೆಯನ್ನೇ ಹಿಂಬಾಲಿಸಿ ಅಕ್ರಮವಾಗಿ ಮನೆಯೊಳಗೆ ನುಗ್ಗಿದ ಅಪರಿಚಿತ ಖದೀಮರು, ಶಾಂತ ಕಾರಂತ್ ಅವರನ್ನು ಜೋರಾಗಿ ತಳ್ಳಿ ಆಕೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.