ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಶಿಮಂತೂರು ದೇವಸ್ಥಾನಕ್ಕೆ ಪ್ರದಾನ ರಸ್ತೆ ಸಂಪರ್ಕ ಕಲ್ಪಿಸುವ ಕಿಲ್ಪಾಡಿ ಗ್ರಾಮದ ತಿರುಮಲ ಗುತ್ತು ಬಳಿಯ ಶಕೀಲಾ ಪೂಜಾರಿ ಎಂಬವರ ಮನೆಯಿಂದ ಶನಿವಾರ ಹಾಡು ಹಗಲೇ ಲಕ್ಷಾಂತರ ರೂ ಮೌಲ್ಯದ ನಗ-ನಗದು ಕಳ್ಳತನವಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಕೀಲಾ ಪೂಜಾರಿ ತಮ್ಮ ಪತಿ, ಹರೀಶ್ ಎಂಬುವರ ಜೊತೆ ಮನೆಯಲ್ಲಿ ವಾಸವಾಗಿದ್ದು , ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಘಟನೆ ನಡೆದಿದೆ
ಕಳ್ಳರು ಶಕೀಲಾ ರವರ ಮನೆಯ ಎದುರು ಭಾಗದ ಕಬ್ಬಿಣದ ಬಾಗಿಲಿನ ಒಳಭಾಗದ ಚಿಲಕವನ್ನು ಭಾರವಾದ ಸಾಧನದಿಂದ ತುಂಡರಿಸಿ ಒಳಗಡೆ ಹೋಗಿದ್ದಾರೆ ಬಳಿಕ ತೆರೆದ ಕಪಾಟನ್ನು ಜಾಲಾಡಿ, ಬಟ್ಟೆಯೊಳಗೆ ಅಡಗಿಸಿಟ್ಟಿದ್ದ ಕಪಾಟಿನ ಬೀಗದ ಕೈ ಮೂಲಕ ಕಪಾಟಿನ ಒಳಗಡೆಯ ಡ್ರಾವರ್ ಜಾಲಾಡಿ 6 ಬಳೆ(60 ಗ್ರಾಂ), 1 ನೆಕ್ಲೆಸ್( 20 ಗ್ರಾಂ), 1 ಸರ (35 ಗ್ರಾಂ), 1 ಹವಳ ಸರ (16 ಗ್ರಾಂ), 1 ಮುತ್ತಿನ ಸರ (24 ಗ್ರಾಂ), 4 ಜೊತೆ ಕಿವಿಯೋಲೆ (32 ಗ್ರಾಂ), 15 ಉಂಗುರ (45 ಗ್ರಾಂ), 1 ಕರಿಮಣಿ( 56 ಗ್ರಾಂ), 6 ಚಿನ್ನದ ತುಂಡು (8 ಗ್ರಾಂ), 1 ಪೆಂಡೆಂಟ್ (5 ಗ್ರಾಂ), 1 ಬ್ರಾಸ್ ಲೆಟ್ (10 ಗ್ರಾಂ), 1 ಚೈನ್ (10 ಗ್ರಾಂ) ಸೇರಿ ಸುಮಾರು 40 ,56 ,000 ರೂ ಮೌಲ್ಯದ 321 ಗ್ರಾಂ(39 ಪವನ್ ಚಿನ್ನಾಭರಣ),
ಸುಮಾರು 10,000ರೂ,2000ರೂ ನಾಣ್ಯಗಳು ಸೇರಿ ಲಕ್ಷಾಂತರ ರೂ ಮೌಲ್ಯದ ನಗನಗದು ಹಾಗೂ ಕಪಾಟಿನಲ್ಲಿದ್ದ ಶಕಿಲಾರವರ ಮಗಳ ಚೂಡಿದಾರ ಸಹಿತ ಬಟ್ಟೆ ಬರೆಗಳನ್ನು ಕಳ್ಳತನ ಮಾಡಿದ್ದಾರೆ
ಕಳ್ಳರು ಕಳ್ಳತನ ಮಾಡಿ ವಾಪಸ್ ಹೋಗುವಾಗ ಒಂದು ಕರಿಮಣಿ ಸರವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಹಾಗೂ ಮನೆಯ ಎದುರಿನ ಬಾಗಿಲನ್ನು ಒಳಗಿನ ಬದಿಯಿಂದ ಲಾಕ್ ಮಾಡಿದ್ದಾರೆ .
ಶಕೀಲ ರವರ ಪತಿ ಹರೀಶ್ ರವರು ಬೆಳಿಗ್ಗೆ 8 ಗಂಟೆಗೆ ಎಂದಿನಂತೆ ಕಿನ್ನಿಗೋಳಿಯ ಹಾರ್ಡ್ವೇರ್ ಅಂಗಡಿಗೆ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದು ಮನೆಯಲ್ಲಿ ಶಕೀಲಾ ಪೂಜಾರಿ ರವರು ತಮ್ಮ ಮನೆಯ ಮೇಲ್ಗಡೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಿಲ್ ಶಾದ್ ಎಂಬವರ ಜೊತೆ ಸ್ಕೂಟರಿನಲ್ಲಿ ಮುಲ್ಕಿ ವರೆಗೆ ಹೋಗಿ ಬಳಿಕ ಬಸ್ಸಿನಲ್ಲಿ ಪಡುಪಣಂಬೂರು ಶನಿಮಂದಿರ ಹಾಗೂ ಪಾವಂಜೆ ದೇವಸ್ಥಾನ ಹಾಗೂ ಕಾರ್ನಾಡ್ ಸಂತೆಗೆ ಹೋಗಿ ವಾಪಸ್ ಸಂಜೆ ನಾಲ್ಕು ಗಂಟೆಗೆ ಮನೆ ಕಡೆ ಬರುವಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಹಾಡು ಹಗಲೇ ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳ್ಳತನ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ
ಸ್ಥಳಕ್ಕೆ ಶ್ವಾನದಳ, ಬೆರಳಚ್ಚುತಜ್ಞರು , ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್, ಸಾಮಾಜಿಕ ಕಾರ್ಯಕರ್ತರಾದ ಭೀಮಾಶಂಕರ್, ಕಾರ್ನಾಡ್ ಆಟೋ ಚಾಲಕರ ಸಂಘದ ಅಧ್ಯಕ್ಷ ಕಿರಣ್ ಶಿಮಂತೂರು ಭೇಟಿ ನೀಡಿದ್ದಾರೆ. ಮನೆ ಕಳ್ಳತನವಾದ ಹಿಂದಿನ ದಿನ ಕೆಲ ಅನುಮಾನ ವ್ಯಕ್ತಿಗಳು ರಾತ್ರಿ ಹೊತ್ತು ಮನೆಯ ಸುತ್ತಮುತ್ತ ಓಡಾಡುತ್ತಿದ್ದರು ಎಂದು ಶಕೀಲಾ ತಿಳಿಸಿದ್ದಾರೆ
ಶಕೀಲಾ ರವರ ಮನೆಯ ಪಕ್ಕ ಯಾವುದೇ ಮನೆ ಇಲ್ಲದಿರುವುದು ಹಾಗೂ ದಾರಿದೀಪದ ಅವ್ಯವಸ್ಥೆ ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮುಲ್ಕಿ ಪರಿಸರದಲ್ಲಿ ಕಳ್ಳತನ ಮತ್ತೆ ಶುರುವಾಗಿದ್ದು ಕಳೆದ ತಿಂಗಳುಗಳ ಹಿಂದೆ ಠಾಣಾ ವ್ಯಾಪ್ತಿಯ ಕವಾತ್ತಾರು ಬಳಿ ಮನೆಯೊಂದರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇದೇ ರೀತಿ ಕಳ್ಳತನವಾಗಿದ್ದು ಇದುವರೆಗೂ ಕಳ್ಳರು ಪತ್ತೆಯಾಗಿಲ್ಲ. ಹಾಗೆಯೇ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನದಲ್ಲಿ ಕೂಡಾ ಲಕ್ಷಾಂತರ ರೂ ಮೌಲ್ಯದ ದೈವದ ಸೊತ್ತುಗಳು ಕೂಡ ಕಳ್ಳತನ, ಈಗ ತಿರುಮಲ ಗುತ್ತು ಬಳಿಯ ಶಕೀಲಾ ರವರ ಲಕ್ಷಾಂತರ ರೂ ಮೌಲ್ಯದ ಮನೆ ಕಳ್ಳತನ ಕಿಲ್ಪಾಡಿ, ಶಿಮಂತೂರು ಪರಿಸರದ ನಾಗರಿಕರನ್ನು ಕಂಗಡಿಸಿದೆ
ಕೂಡಲೇ ಮುಲ್ಕಿಪೊಲೀಸರು ಕಳ್ಳರನ್ನು ಬಂಧಿಸುವುದರ ಜೊತೆಗೆ ಬೀಟ್ ವ್ಯವಸ್ಥೆ ಬಲಪಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.





