ಮಣಿಪಾಲ: ಉಡುಪಿ ತಾಲ್ಲೂಕಿನ ಮಣಿಪಾಲದ WGSHA ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಓರ್ವ ಯುವಕನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಾಯಿ ಸಂಜಯ್ ಬಿಂಗಾರೆ (21) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿ ಶ್ರೀ ಲೆಸ್ಲಿ ಜೋಸೆಫ್ ಮ್ಯಾಥ್ಯೂ (60) ಅವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದು ನಂ. 23/2026 ಸಲ್ಲಿಸಿದ್ದರು.
ಅವರ ಮಗಳು ಪೌಲಾ ಲೆಸ್ಲಿ ವಾರ್ಜ್ರಿ ಮಣಿಪಾಲದ WGSHA ಕಾಲೇಜಿನಲ್ಲಿ 2ನೇ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 07-11-2025 ರ ರಾತ್ರಿ 11:45 ರಿಂದ 08-11-2025 ರ ಬೆಳಿಗ್ಗೆ 8:40 ರ ನಡುವೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಐರಿಸ್ ಪ್ಲಾಜಾ ಬಿಲ್ಡಿಂಗ್‌ನ ರೂಂ ನಂ. 504 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಣಿಪಾಲ ಠಾಣೆ ಯುಡಿಆರ್ ನಂ. 45/2025 ಕಲಂ 194 BNSS ರಂತೆ ಪ್ರಕರಣ ದಾಖಲಾಗಿ ಅಂತಿಮ ವರದಿ ಸಲ್ಲಿಸಿ ಪ್ರಕರಣ ಮುಕ್ತಾಯಗೊಳಿಸಲಾಗಿತ್ತು.
ನಂತರ ಮೃತಳ ಆಪಲ್ ಐಪ್ಯಾಡ್, ಐಫೋನ್, ಡೈರಿ, ಮೊಬೈಲ್ ಫೋನ್ ಡಿಜಿಟಲ್ ದಾಖಲೆಗಳನ್ನು ತಂದೆಗೆ ಹಸ್ತಾಂತರಿಸಲಾಗಿತ್ತು. ತಂದೆ ಅದನ್ನು ಪರಿಶೀಲಿಸಿದಾಗ ಸಾಯಿ ಭಿಂಗೇರೆ @ ಸಾಯಿ ಪಾಟೀಲ್ ಎಂಬಾತನೊಂದಿಗೆ ಸ್ನ್ಯಾಪ್ ಚಾಟ್ ಮೂಲಕ ವಿನಿಮಯವಾದ ದಾಖಲೆಗಳು ಸಿಕ್ಕಿವೆ.
ಆತನಿಂದ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್ ಮೇಲ್ ನಡೆದಿರುವ ಸಾಧ್ಯತೆ ಇದೆ ಎಂದು ತಂದೆ ದೂರು ನೀಡಿದ್ದರು.
ಈ ದೂರಿನಂತೆ ಮಣಿಪಾಲ ಠಾಣೆ ಅಪರಾಧ ಕ್ರಮಾಂಕ 90/2026 ಕಲಂ 108(5) BNS (ಆತ್ಮಹತ್ಯೆಗೆ ಪ್ರಚೋದನೆ) ರಂತೆ ಪ್ರಕರಣ ದಾಖಲಿಸಲಾಗಿತ್ತು.
ಮಣಿಪಾಲ ಠಾಣೆ ನಿರೀಕ್ಷಕ ಮಹೇಶ್ ಪ್ರಸಾದ್ ಸೂಚನೆಯಂತೆ PSI ತಿಮ್ಮೇಶ್ ಬಿ.ಎನ್ ತನಿಖೆ ಕೈಗೊಂಡು ಆರೋಪಿ ಸಾಯಿ ಸಂಜಯ್ ಬಿಂಗಾರೆ (21) ತಂದೆ ಸಂಜಯ್ ಬಿಂಗಾರೆ, ವಾಸ: ಅಲೋಕ್ ಸಿಟಿ, ಸೈಲಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ದಿಯು ಕೇಂದ್ರಾಡಳಿತ ಪ್ರದೇಶದವನನ್ನು ದಿನಾಂಕ 09-09-2026 ರಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.




