ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ವಂಚಿಸಿ ಹಣ ಪಡೆದುಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ (56) ಅವರು ನೀಡಿದ ದೂರಿನಂತೆ, ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ಗೆ ಬದಲಾಗಿ ಅಪರಿಚಿತ ವ್ಯಕ್ತಿಗಳು ‘Hotel Accommodation’ ಹೆಸರಿನಲ್ಲಿ jagadambikaguesthouse.xyz ಎಂಬ ನಕಲಿ ವೆಬ್‌ಸೈಟ್‌ನ್ನು ಅಕ್ರಮ ಲಾಭದ ಉದ್ದೇಶದಿಂದ ಸೃಷ್ಟಿಸಿದ್ದಾರೆ.
ಈ ನಕಲಿ ವೆಬ್‌ಸೈಟ್ ಮೂಲಕ ಜಗದಾಂಬಿಕಾ ಅತಿಥಿ ಗೃಹದ ಕೊಠಡಿಗಳನ್ನು ಕಾಯ್ದಿರಿಸುವುದಾಗಿ ಭಕ್ತರನ್ನು ನಂಬಿಸಿ, ವಾಟ್ಸ್‌ಆಪ್ ಮೂಲಕ ಸಂಪರ್ಕಿಸಿ ಫೋನ್‌ಪೇ ಕ್ಯೂಆರ್ ಕೋಡ್ ಕಳುಹಿಸಿ ಹಣ ಪಡೆದುಕೊಳ್ಳಲಾಗುತ್ತಿತ್ತು. ಬಳಿಕ ನಕಲಿ ರಶೀದಿಗಳನ್ನು ನೀಡಿ ದೇವಳದ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ನಂಬಿಸಿ ಭಕ್ತರಿಂದ ಹಣ ವಸೂಲಿ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಮೂಲಕ ದೇವಳದ ಭಕ್ತರಿಗೆ ವಂಚಿಸಿ ಹಣ ದೋಚುತ್ತಿರುವ ಬಗ್ಗೆ ದೂರು ದಾಖಲಾಗಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2026ರಂತೆ IT Act ಕಲಂ 66(c) ಹಾಗೂ BNS ಕಲಂ 318ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.




