ಉಡುಪಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸುಮಾರು 10 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.
ಅತ್ತೂರು ಪದವು ಗ್ರಾಮದ ಐಶ್ವರ್ಯ ಆಚಾರ್ಯ (28) ಮೃತಪಟ್ಟವರು.
2025ರ ನವೆಂಬರ್ 13ರಂದು ಜಗದೀಶ್ ಆಚಾರ್ಯ (40) ಅವರು ಪತ್ನಿ ಐಶ್ವರ್ಯ ಅವರನ್ನು ಸ್ಕೂಟರ್‌ನಲ್ಲಿ ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ನಿಟ್ಟೆಯಿಂದ ಬೆಳ್ಮಣ್ –ಮುಂಡ್ಕೂರು ಮಾರ್ಗವಾಗಿ ಕಿನ್ನಿಗೋಳಿ ಕಡೆಗೆ ತೆರಳುತ್ತಿದ್ದರು.
ಬೆಳ್ಮಣ್ ಗ್ರಾಮದ ಇಂದಾರು ಎಂಬಲ್ಲಿ ಬೆಳಿಗ್ಗೆ ಸುಮಾರು 7.20ಕ್ಕೆ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಿದ್ದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಜಗದೀಶ್ ಅವರಿಗೆ ಸೊಂಟ ಹಾಗೂ ಕೈಗೆ ಗಾಯವಾಗಿದ್ದರೆ, ಐಶ್ವರ್ಯ ಅವರ ಕುತ್ತಿಗೆ ಮತ್ತು ಬೆನ್ನುಹುರಿಗೆ ತೀವ್ರ ಗಾಯವಾಗಿತ್ತು.
ಇಬ್ಬರನ್ನೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಒಂದೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಐಶ್ವರ್ಯ ಅವರನ್ನು ಮನೆಗೆ ಕರೆತರಲಾಗಿತ್ತು. ಹಾಸಿಗೆ ಹಿಡಿದಿದ್ದ ಅವರಿಗೆ ಆಗಸ್ಟ್ 27ರಂದು ಅಪಘಾತದಿಂದ ಉಂಟಾಗಿದ್ದ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 3ರಂದು ಮುಂಜಾನೆ 3 ಗಂಟೆ ಸುಮಾರಿಗೆ ಐಶ್ವರ್ಯ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




